ಕಾರವಾರ: 2022-23ನೇ ಸಾಲಿನ ತಾಲೂಕು ಪಂಚಾಯತ್ ಜಮಾಬಂದಿ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಜಮಾಬಂಧಿ ಡಿಡಿಪಿಯು ಲತಾ ನಾಯಕ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ವಿವಿಧ ಯೋಜನೆಗಳ ಕಾಮಗಾರಿವಾರು ಪ್ರಗತಿ ವರದಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳಲ್ಲಿ ಲೆಕ್ಕ ಶೀರ್ಷಿಕೆವಾರು ಅನುದಾನ ಬಿಡುಗಡೆ ಹಾಗೂ ಖರ್ಚಿನ ಕುರಿತಾದ ಪರಿಶೀಲನೆ ನಡೆಸಿದರು.
ಈ ವೇಳೆ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸೋಮಶೇಖರ್ ಮೆಸ್ತ ಅವರು ಮಾತನಾಡಿ, ಇಲಾಖಾವಾರು ಬಿಡುಗಡೆಯಾದ ಅನುದಾನದ ಕುರಿತು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಯಾವುದೇ ಅನುದಾನ ವ್ಯಪಗತವಾಗದಂತೆ ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ವಿನಿಯೋಗಿಸಲು ತಿಳಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಆನಂದಕುಮಾರ ಬಾಲಪ್ಪನವರ್, 2023-24ನೇ ಸಾಲಿನ ವಿವಿಧ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಕಾಯ್ದಿರಿಸಿದ ಅನುದಾನದಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮಾಹಿತಿ ಸಲ್ಲಿಸಲು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಅನಿತಾ ಬಂಡಿಕಟ್ಟಿ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.