ಶಿರಸಿ: ಪ್ರಸ್ತುತ ದಿನಗಳಲ್ಲಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರು ವರ್ಗಾವಣೆಯಾದಾಗ ಕಂಬನಿ ಮಿಡಿಯುವ ವಿದ್ಯಾರ್ಥಿಗಳು ಕಾಣಸಿಗುವುದು ಕಷ್ಟಸಾಧ್ಯ. ಹೀಗಿರುವಾಗ ಕಾಲೇಜೇ ಕಣ್ಣೀರಿಟ್ಟು ವರ್ಗಾವಣೆಗೊಂಡ ಅಧ್ಯಾಪಕರಿಗೆ ಬೀಳ್ಕೊಡುವುದೆಂದರೆ ಅಚ್ಚರಿಯೇ ಸರಿ.
ಹೌದು, ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಿದ್ದಾಪುರ ಪದವಿ ಕಾಲೇಜಿಗೆ ವರ್ಗಾವಣೆಗೊಂಡ ರಾಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಎನ್.ನಾಯ್ಕ್ ಅವರನ್ನು 77ನೇ ಸ್ವಾತಂತ್ರ್ಯೋತ್ಸವದಂದು ಕಾಲೇಜಿನಿಂದ ವಿದ್ಯಾರ್ಥಿಗಳು ಬೀಳ್ಕೊಡುವಾಗ ಎಲ್ಲರ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅವರ ವರ್ಗಾವಣೆ ಅರಗಿಸಿಕೊಳ್ಳಲಿಕ್ಕಾಗದ ಭಾವ ವಿದ್ಯಾರ್ಥಿಗಳ ಚಟಪಟಿಕೆಯಲ್ಲಿತ್ತು. ಅನಿಸಿಕೆ ಮಾತುಗಳಲ್ಲಿ ದುಃಖ ಉಮ್ಮಳಿಸಿ ಬರುತಿತ್ತು.
ಸತೀಶ್ ಎನ್.ನಾಯ್ಕ್ ಅವರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಬರೀ ಉಪನ್ಯಾಸಕರಾಗಿರಲಿಲ್ಲ. ಒಬ್ಬ ಸಾಂಸ್ಕೃತಿಕ ನಾಯಕನಾಗಿ, ಸಹಿಷ್ಣುತೆಯ ವ್ಯಕ್ತಿಯಾಗಿ ವಿದ್ಯಾರ್ಥಿಗಳು, ಸಹದ್ಯೋಗಿಗಳು, ಸಿಬ್ಬಂದಿ ಜತೆ ಗುರುತಿಸಿಕೊಂಡಿದ್ದರು. ಎಲ್ಲರ ಜತೆಗೆ ಬೆರೆಯುವ, ಸದಾ ಒಳಿತನ್ನೇ ಬಯಸುವ, ಕಾಲೇಜು ಅಭಿವೃದ್ಧಿಗೆ ಚಿಂತನೆ ಮಾಡುವ, ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವ ಇರಾದೆ ಅವರಲ್ಲಿ ನೆಲೆಸಿತ್ತಲ್ಲದೆ ಕಾರ್ಯಗತಗೊಳಿಸುತ್ತಲೂ ಬಂದಿದ್ದರಿಂದ ಸತೀಶ್ ನಾಯ್ಕ್ ಎಂದರೆ ಇಡೀ ಕಾಲೇಜಿಗೆ ಅಚ್ಚು ಮೆಚ್ಚು.
ಪಾಠದ ಜತೆಗೆ ಎನ್ಎಸ್ಎಸ್ ಅಧಿಕಾರಿಯಾಗಿ 14 ವರ್ಷ ಸೇವೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ನಾಯಕತ್ವದ ಜತೆಗೆ ಸತ್ಪ್ರಜೆಗಳನ್ನಾಗಿ ನಿರ್ಮಿಸಿದ್ದಾರೆ. ಇದರ ಪ್ರತಿಫಲವಾಗಿ ಎನ್ಎಸ್ಎಸ್ ಉತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಸಾಂಸ್ಕೃತಿಕ ವೇದಿಕೆ ಸಂಚಾಲಕರಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ಜಿಲ್ಲಾ, ರಾಜ್ಯ ಮಟ್ಟದ ಹಲವು ಪ್ರಶಸ್ತಿ, ಬಹುಮಾನಗಳನ್ನು ಕಾಲೇಜಿಗೆ ತರುವಲ್ಲಿ ಸತೀಶ್ ನಾಯ್ಕ್ ಪ್ರೋತ್ಸಾಹ ಮರೆಯುವಂತಿಲ್ಲ. ಇಂತಹ ಅಧ್ಯಾಪಕರಿಗೆ ವಿದ್ಯಾರ್ಥಿಗಳು ಗುರುವಂದನಾ ಪತ್ರ ನೀಡುವ ಮೂಲಕ ವಿಶೇಷವಾಗಿ ಬೀಳ್ಕೊಟ್ಟಿದ್ದಾರೆ. ಸತೀಶ್ ನಾಯ್ಕ್ ಅವರನ್ನು ಶಿರಸಿ ಕಾಲೇಜಿಗೆ ಮರು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಇತ್ತೀಚೆಗೆ ವಿದ್ಯಾರ್ಥಿಗಳು ಶಾಸಕ ಭೀಮಣ್ಣ ಟಿ.ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಎಲ್ಲಾ ವೃತ್ತಿಗಳಿಗಿಂತ ಮೇಷ್ಟ್ರು ವೃತ್ತಿ ದೊಡ್ಡದು. ಆ ವೃತ್ತಿಯನ್ನು ಸರಿಯಾಗಿ ನಿಭಾಯಿಸಲು ದೊಡ್ಡತನ ಬೇಕು. ಅದನ್ನು ಶಿರಸಿ ಕಾಲೇಜಿನಲ್ಲಿ ನಿಭಾಯಿಸಲು ಇಲ್ಲಿನ ಮಾರಿಕಾಂಬ ದೇವಿಯ ಆಶೀರ್ವಾದ ಇದೆ. ಸದಾ ವಿದ್ಯಾರ್ಥಿಗಳ ಏಳಿಗೆ ಬಗ್ಗೆ ಚಿಂತನೆ ಮಾಡಿದೆ. ಮನುಷ್ಯ ಕುಲ ತಾನೊಂದೆ ವಲಂ ಎಂಬ ಪಂಪನ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಿದೆ. ಪ್ರಾಂಶುಪಾಲರು, ವಿದ್ಯಾರ್ಥಿಗಳು, ಸಹದ್ಯೋಗಿಗಳು, ಸಿಬ್ಬಂದಿ ಇಷ್ಟಪಟ್ಟರು – ಸತೀಶ್ ಎನ್.ನಾಯ್ಕ್, ಸಹ ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿ.
ಹೃದಯ ಶ್ರೀಮಂತಿಕೆಯ ಉಪನ್ಯಾಸಕರು ಡಾ.ಸತೀಶ್ ಎನ್.ನಾಯ್ಕ್ ಸರ್. ಅವರೆಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಅವರಿಲ್ಲ ಎಂದರೆ ಕಾಲೇಜು ಸೊರಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಸಕರು, ಅಧಿಕಾರಿಗಳು ಸತೀಶ್ ನಾಯ್ಕ್ ಸರ್ ಅವರನ್ನು ಶಿರಸಿ ಕಾಲೇಜಿಗೆ ಮರು ವರ್ಗಾವಣೆ ಮಾಡಬೇಕು – ಅಮಿತ್ ದೊಡ್ಮನಿ, ವಿದ್ಯಾರ್ಥಿ.