ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗದ್ದೆನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು.
ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ನಿತ್ಯಾನಂದ ಕನ್ನ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು. ಪ್ರತಿವರ್ಷವೂ ಗದ್ದೆನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನ ನಡೆಸುವ ಈ ಶಾಲಾ ಮಕ್ಕಳು ಈ ವರ್ಷವೂ ಇದನ್ನು ಮುಂದುವರೆಸಿದ್ದಾರೆ. ಶಾಲೆಯ 4 ರಿಂದ 6ನೇ ತರಗತಿಯ ಆಸಕ್ತ 12 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಒಂದು ತಾಸಿನಲ್ಲಿ ಅಂದಾಜು 4.5 ಗುಂಟೆ ಕ್ಷೇತ್ರದಲ್ಲಿ ನಾಟಿ ಮಾಡಿ ಅನುಭವ ಪಡೆದರು.
ಸ್ಥಳದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಂಗಾರ್ಯ ಗೌಡ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸ್ಥಳೀಯರಾದ ಗೋವಿಂದ ಗಿರಿಯಾ ಗೌಡ, ಲೋಕೇಶ ಪದ್ಮನಾಭ ಗೌಡ, ಗದ್ದೆಯ ಮಾಲಿಕರಾದ ನಿತ್ಯಾನಂದ ಕನ್ನ ಗೌಡ ಹಾಗೂ ಹುಲ್ಕುತ್ರಿ ಶಾಲೆಯ ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ ಹಾಜರಿದ್ದರು.