ಕುಮಟಾ: ತಾಲೂಕಿನ ಸಂತೇಗುಳಿ, ದೀವಗಿ, ಕಲಭಾಗ, ಕೂಜಳ್ಳಿ, ಕಾಗಲ್ ಮತ್ತು ಕೋಡ್ಕಣಿ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಸಂತೇಗುಳಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಬಂಡಾಯ ಕಾಂಗ್ರೆಸ್ ಮಹೇಶ ನಾಯ್ಕ ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಅಧ್ಯಕ್ಷರಾಗುವ ಮೂಲಕ ಗೆಲುವಿನ ನಗೆ ಬೀರಿದರು. ನೂತನ ಉಪಾಧ್ಯಕ್ಷರಾಗಿ ಶೈಲಾ ಜಯರಾಮ ಗೌಡ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಮುಖಂಡರಾದ ವಿನಾಯಕ ಭಟ್ಟ, ನಾಗರಾಜ ನಾಯ್ಕ ಸೇರಿದಂತೆ ಸರ್ವ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ದೀವಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಗದೀಶ ಸುರೇಶ ಭಟ್ಟ, ಉಪಾಧ್ಯಕ್ಷರಾಗಿ ವೀಣಾ ವಿಷ್ಣು ಗೌಡ ಆಯ್ಕೆಯಾಗಿದ್ದಾರೆ. ಕಲಭಾಗ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಂಜುನಾಥ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಗಾವಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಅವಧಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದಂತಾಗಿದೆ. ಶಾಸಕ ದಿನಕರ ಶೆಟ್ಟಿ ಅವರು ಕಲಭಾಗ ಗ್ರಾ. ಪಂ. ಗೆ ತೆರಳಿ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಹಾರವನ್ನು ಹಾಕಿ ಅಭಿನಂದನೆ ಸಲ್ಲಿಸಿದರು. ಕುಮಟಾ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಚುನಾವಣಾ ಉಸ್ತುವಾರಿ ಅಶೋಕ ಪ್ರಭು, ಪಂಚಾಯತದ ನಿಕಟಪೂರ್ವ ಅಧ್ಯಕ್ಷೆ ಗೀತಾ ಕುಬಾಲ, ಸ್ಥಳೀಯ ಪ್ರಮುಖರಾದ ದೇವರಾಯ ನಾಯ್ಕ, ರಾಜು ಪಟಗಾರ, ಜಯವಿಠ್ಠಲ ಕುಬಾಲ, ಗಣಪತಿ ನಾಗಪ್ಪ ಪಟಗಾರ ಹಾಗೂ ಪಂಚಾಯತ್ ಸದಸ್ಯರು ಇದ್ದರು.
ಕೊಡ್ಕಣಿ ಗ್ರಾ.ಪಂ ಅಧ್ಯಕ್ಷರಾಗಿ ಚಂದ್ರಕಲಾ ರಾಮರಾಯ ನಾಯ್ಕ, ಉಪಾಧ್ಯಕ್ಷರಾಗಿ ಮುರ್ಕುಂಡಿ ಹಾಲಪ್ಪ ನಾಯ್ಕ ಆಯ್ಕೆಯಾದರು. ಈ ಪಂಚಾಯತ್ ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ಬಿದ್ದಿದೆ. ಕೂಜಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಗಲಾ ಶಂಕರ ಅಡಿಗುಂಡಿ ಉಪಾಧ್ಯಕ್ಷರಾಗಿ ವೈಭವ ಗೋವಿಂದ ನಾಯ್ಕ ಆಯ್ಕೆಯಾದರು. ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗದ ಆಧ್ಯಕ್ಷ ಸತೀಶ ನಾಯ್ಕ, ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಮುಖಂಡರಾದ ಭುವನ ಭಾಗ್ವತ್, ಸಚಿನ್ ನಾಯ್ಕ ಹೊಳೆಗದ್ದೆ, ಗ್ರಾ.ಪಂ ಸರ್ವ ಸದಸ್ಯರು ಹಾಜರಿದ್ದರು.
ಕಾಗಲ್ ಗ್ರಾ.ಪಂ ಅಧ್ಯಕ್ಷರಾಗಿ ಕಾಂಗ್ರೆಸ್ನ ಸಾವಿತ್ರಿ ವೆಂಕಟೇಶ ಪಟಗಾರ, ಉಪಾಧ್ಯಕ್ಷರಾಗಿ ಪ್ರಶಾಂತ ಅಶೋಕ ಶೆಟ್ಟಿ ಆಯ್ಕೆಯಾದರು. ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ಕಾಂಗ್ರೆಸ್ ಮುಖಂಡರಾದ ವಿ.ಎಲ್. ನಾಯ್ಕ, ಯಶೋಧಾ ಶೆಟ್ಟಿ, ಸಚೀನ್ ನಾಯ್ಕ, ಇತರರು ಇದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ವಿವಿಧ ಗ್ರಾ.ಪಂ ಸರ್ವ ಸದಸ್ಯರು ಹಾಗೂ ಗೊತ್ತುಪಡಿಸಿದ ಚುನಾವಣಾಧಿಕಾರಿಗಳು ನೇಮಕಗೊಂಡು ಚುನಾವಣೆಯನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಿದರು.