ದಾಂಡೇಲಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡನೆಯು ಹಳೆ ನಗರಸಭೆಯ ಕಟ್ಟಡದ ಆವರಣದಲ್ಲಿರುವ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊoಡಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಸಾಹಿತ್ಯ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ಹೇಳಿರುವಂತೆ ಪರಿಷತ್ತಿನ ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಮಾಡಿದ್ದೇವೆ. ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗಬೇಕಾದರೆ ವ್ಯವಹಾರದಲ್ಲಿ ಮತ್ತು ಲೆಕ್ಕಪತ್ರದಲ್ಲಿ ಬದ್ಧತೆಯಿರಬೇಕು. ಆ ದಿಸೆಯಲ್ಲಿ 2021-22 ಮತ್ತು 2022-23ನೇ ಸಾಲಿನ ವಾರ್ಷಿಕ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಪರಿಶೋಧಕರ ಆಡಿಟ್ ವರದಿಯೊಂದಿಗೆ ಮಂಡಿಸಲಾಗಿದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರ ವರದಿಯ ಬಗ್ಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮೆಚ್ಚುಗೆ ವ್ಯಕ್ತಪಡಿಸಿ, ಲೆಕ್ಕಚಾರದಲ್ಲಿರುವ ಪಾರದರ್ಶಕತೆ ಮತ್ತು ಶಿಸ್ತನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ನಡಾವಳಿಯಲ್ಲಿ ಶ್ಲಾಘನೆ ವ್ಯಕ್ತಪಡಿಸಿ ದಾಖಲಿಸಲಾಗಿದೆ ಎಂದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಉಪಸ್ಥಿತರಿದ್ದರು. ಲೆಕ್ಕಪತ್ರವನ್ನು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಂಡಿಸಿದರು. ಸಭೆಯಲ್ಲಿ ಕಸಾಪ ಆಜೀವ ಸದಸ್ಯರು ಜಿಲ್ಲಾ ಕಸಾಪ ಮತ್ತು ತಾಲ್ಲೂಕು ಕಸಾಪ ಘಟಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಜಿಲ್ಲಾ ಕಸಾಪ ಘಟಕದ ಸಂಘ ಸಂಸ್ಥೆಗಳ ಪ್ರತಿನಿಧಿ ಡಾ.ವೆಂಕಟೇಶ್ ನಾಯ್ಕ ಬುಡಕಟ್ಟು ಸಮುದಾಯಗಳ ಬದುಕು ಬವಣೆ ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕಸಾಪ ಕಾರ್ಯೋನ್ಮುಖವಾಗಬೇಕೆಂದು ಕರೆ ನೀಡಿದರು.
ಕಸಾಪ ಕಾರ್ಯಚಟುವಟಿಕೆಗಳಿಗೆ ಮತ್ತು ಸಾಹಿತ್ಯ ಭವನಕ್ಕೆ ಬೇಕಾದ ಅವಶ್ಯ ಮೂಲಸೌಕರ‍್ಯಗಳನ್ನು ಒದಗಿಸಿದ್ದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪರವಾಗಿ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿಯವರನ್ನು ಕಸಾಪ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಸಮಿತಿಯ ಪಿ.ಎಂ.ಮುಕ್ರಿಯವರು ವಾರ್ಷಿಕ ವರದಿ ವಾಚಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಅವರು ಸ್ವಾಗತಿಸಿದರು. ಕಸಾಪ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು. ಕಸಾಪ ಜಿಲ್ಲಾ ಘಟಕದ ಸಿದ್ದಪ್ಪ ಬಿರದಾರ ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ಕಸಾಪ ಆಜೀವ ಸದಸ್ಯರು ಭಾಗವಹಿಸಿದ್ದರು.