ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಅವಶ್ಯ ದಾಖಲೆಗಳ ಸಹಿತ ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆ ಕಳಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
ಹೊನ್ನಾವರವು ಹಲವಾರು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಮೀನುಗಾರಿಕೆ, ಅಡಿಕೆ, ತೆಂಗು, ತರಕಾರಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ಹೆಸರುವಾಸಿಯಾದ ಪ್ರಸಿದ್ಧ ದೇವಾಲಯಗಳಿದ ಕೂಡಿದೆ. ಇಲ್ಲಿಯ ಪರಿಸರ, ನದಿ, ಕಡಲತೀರಗಳು ಹೆಸರುವಾಸಿಯಾಗಿವೆ. ಇತ್ತೀಚೆಗೆ ಪ್ರವಾಸೋದ್ಯಮದಿಂದ ವಿಫುಲವಾಗಿ ಬೆಳೆಯುತ್ತಿದ್ದು, ಸಾವಿರಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿದ್ದಾರೆ. ಹೀಗೆ ಅಭಿವೃದ್ಧಿಯತ್ತ ಸಾಗುತ್ತಿರುವ ಪಟ್ಟಣ ಪಂಚಾಯತವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದು ಅತಿ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಈ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಸ್ತಾವನೆ ಶಿಫಾರಸು ಕಳಿಸಲು ತಿಳಿಸಿದ್ದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಬಗ್ಗೆ ಈಗ ಪುನಃ ಪ್ರಸ್ತಾವನೆ ಶಿಫಾರಸು ಮಾಡಿ ಕಳಿಸಲು ತಿಳಿಸಿದ್ದಾರೆ. ಹೊನ್ನಾವರದ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಅಭಿವೃದ್ಧಿ ಪಡಿಸಲು ಅನುಕೂಲವಾಗುವಂತೆ ಪುರಸಭೆಯನ್ನಾಗಿ ಮಾಡಲು ಅವಶ್ಯ ದಾಖಲೆಗಳ ಸಹಿತ ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆ ಕಳಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.