ಕಾರವಾರ: ಗ್ರಾಮೀಣ ಭಾಗದ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳನ್ನು ವೃದ್ಧಿಸುವ ಹಾಗೂ ಪ್ರೋತ್ಸಾಹಿಸುವ ಮಹತ್ತರ ಉದ್ದೇಶದಿಂದ ಜಿಲ್ಲಾ ಪಂಚಾಯತ್‌ನ ಸಿಇಒ ಈಶ್ವರ ಖಂಡೂ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡೇ-ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರನ್ನು ಪಂಜರು ಕೃಷಿ ಕುರುಡಿ ಮೀನು ಸಾಕಾಣಿಕೆ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.
ಕುರುಡಿ ಮೀನುಗಳನ್ನು ಸಮುದ್ರದ ಉಪ್ಪು ನೀರು, ನದಿ, ಬಾವಿ ಸೇರಿದಂತೆ ಇತರೆ ಸಿಹಿ ನೀರಿನಲ್ಲೂ ಸಾಕಬಹುದಾಗಿದ್ದು, ಜಿಲ್ಲೆಯಲ್ಲಿ ಪ್ರಯೋಗಾರ್ಥವಾಗಿ ದೀರ್ಘ ಕರಾವಳಿ ಪ್ರದೇಶ ಹೊಂದಿರುವ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಬ್ಬಿ ಸಮುದ್ರ ಹಾಗೂ ಶರಾವತಿ ಹಿನ್ನೀರ ಸಂಗಮ ಸ್ಥಾನದಲ್ಲಿ ಗ್ರಾಮದ ಶ್ರೀನಿಧಿ ಸ್ವಸಹಾಯ ಸಂಘದ ಮಹಿಳೆಯರು ಆಸಕ್ತಿಯಿಂದ ಡೇ-ಎನ್‌ಆರ್‌ಎಲ್‌ಎಂ ಯೋಜನೆಯಡಿ 5 ಲಕ್ಷ ರೂ. ಸಹಾಯಧನ ಪಡೆದುಕೊಂಡು ಪಂಜರು ಕೃಷಿ ಕುರುಡಿ ಮೀನು ಸಾಕಾಣಿಕೆ ಚಟುವಟಿಕೆ ಪ್ರಾರಂಭಿಸಿದ್ದಾರೆ. ಜಿಲ್ಲೆಯ ಐದು ತಾಲ್ಲೂಕುಗಳ ಜನರಿಗೆ ಮೀನುಗಾರಿಕೆಯೇ ಜೀವನೋಪಾಯದ ಮೂಲ ಕಸಬು ಆಗಿರುವುದರಿಂದ ಮಹಿಳೆಯರ ಮೀನು ಸಾಕಾಣಿಕೆ ಕಾರ್ಯ ಇತರರಿಗೂ ಮಾದರಿಯಾದೆ.