ಕಾರವಾರ: ಮಣಿಪಾಲ್ ಆರೋಗ್ಯ ಕಾರ್ಡ್ 2023ರ ನೋಂದಣಿ ಆರಂಭವಾಗಿದ್ದು, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯರಾಗಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕಾರ್ಡ್ ಯೋಜನೆ ಪ್ರಾಂಭಿಸಿ 22 ವರ್ಷಗಳನ್ನ ಪೂರೈಸಿದ್ದೇವೆ. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್’ನ ಧ್ಯೇಯವಾಕ್ಯವಾಗಿದ್ದು, ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಈ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ ಎಂದರು.
ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಒಬ್ಬರಿಗೆ 300, ಕೌಟಂಬಿಕ ಕಾರ್ಡ್ಗೆ 600 ಮತ್ತು ಕುಟುಂಬ ಪ್ಲಸ್ ಯೋಜನೆಗೆ 750 ರೂ. ಇದ್ದು, ಕರಾವಳಿ ಕರ್ನಾಟಕ ಮತ್ತು ಗೋವಾದ ಮಣಿಪಾಲ್ ಗ್ರೂಪ್ ಆಸ್ಪತ್ರೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲ್ ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ದಂತ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಈ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಡ್ಗೆ ನೋಂದಣಿಗಾಗಿ ಸೇಂಟ್ ಮಿಲಾಗ್ರಿಸ್ ಕ್ರಿಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಎಲ್ಲಾ ಶಾಖೆಗಳಲ್ಲಿ ಹಾಗೂ ಶ್ರೀ ಮಹರ್ಷಿ ಮನು ಕ್ರಿಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಮಾಜಾಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಆಸ್ಪತ್ರೆಯ ಸಹ ವ್ಯವಸ್ಥಾಪಕ ಕೃಷ್ಣಪ್ರಸಾದ ಬಿ.ಎಸ್. ಮಾರುಕಟ್ಟೆ ವಿಭಾಗದ ಪ್ರತಿನಿಧಿ ಚೇತನ್, ಸೇಂಟ್ ಮಿಲಾಗ್ರಿಸ್ ಕಾರವಾರ ಶಾಖಾ ವ್ಯವಸ್ಥಾಪಕ ಫರ್ಜಾನ್ ಶೇಖ್ ಇದ್ದರು.