ಹೊನ್ನಾವರ: ತಾಲೂಕಿನಾದ್ಯಂತ ಬಿಟ್ಟುಬಿಡದೇ ಸುರಿದ ಮಳೆಗೆ ಶುಕ್ರವಾರ ಮುಂಜಾನೆ ತಾಲೂಕಿನ ಹಳದಿಪುರದ ಕಿಳೂರಿನಲ್ಲಿ ಗುಡ್ಡ ಕುಸಿದು ಬಂಡೆ ರಸ್ತೆಗೆ ಉರುಳಿದೆ.
ಕಡ್ಲೆ ಹಾಗೂ ಹಳದಿಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಗುಡ್ಡ ಕುಸಿದಿರುವುದರಿಂದ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಮುಂಜಾನೆಯಿಂದ ಕುಸಿದ ಗುಡ್ಡದ ಬಂಡೆ ತೆರವು ಕಾರ್ಯ ಮಾಡುತ್ತಿದ್ದಾರೆ. ದೊಡ್ಡ ಬಂಡೆ ಆಗಿರುವುದರಿಂದ ಜೆಸಿಬಿ ಮೂಲಕ ತೆರವುಗೊಳಿಸಲು ಕಷ್ಟವಾಗಿದ್ದು ಓಡಾಡಲು ದಾರಿ ಸುಗಮಗೊಳಿಸಲಾಗಿದೆ. ಬಂಡೆ ತೆರವು ಕಾರ್ಯ ಅರ್ಧಕ್ಕೆ ನಿಂತಿದೆ. ವರುಣನ ಆರ್ಭಟ ಇದೇ ರೀತಿ ಮುಂದುವರಿದಲ್ಲಿ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ.
ಗುಡ್ಡ ಕುಸಿದಿರುವ ಸ್ಥಳಕ್ಕೆ ನೋಡಲ್ ಅಧಿಕಾರಿ ಹಾಗೂ ಗ್ರಾಮ ಆಡಳಿತಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ನಾಯ್ಕ ಮುತುವರ್ಜಿ ವಹಿಸಿ ತೆರವು ಕಾರ್ಯ ಕೈಗೊಂಡಿದ್ದಾರೆ. ಜೆಸಿಬಿ ಮೂಲಕ ಸಾಧ್ಯವಾಗದ ಕಾರಣ ತಾಲೂಕಾ ಆಡಳಿತದ ಗಮನಕ್ಕೆ ತಂದರೂ ಯಾವುದೇ ರೀತಿ ಸ್ಪಂದಿಸಿಲ್ಲ. ಈ ಬಗ್ಗೆ ತಹಸೀಲ್ದಾರರ ಬಳಿ ಕೇಳಿದರೆ ನೋಡಲ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಇಂತಹ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿದಾಗ ತಾಲೂಕಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು ಆ ಕಾರ್ಯ ಹೊನ್ನಾವರ ತಾಲೂಕಾಡಳಿತದಿಂದ ನಡೆಯುತ್ತಿಲ್ಲ ಎನ್ನುವ ಗಂಭೀರ ಆರೋಪ ಗ್ರಾ.ಪಂ. ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದಾರೆ.