ಗೋಕರ್ಣ: ನಿರಂತರವಾಗಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಘಟ್ಟದ ಮೇಲ್ಭಾಗದಲ್ಲಿಯೂ ಕೂಡ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದಾಗಿ ಗಂಗಾವಳಿ ನದಿ ನಿಧಾನವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ನದಿ ದಡದ ನಿವಾಸಿಗಳಿಗೆ ತಾಲೂಕು ಆಡಳಿತದ ವತಿಯಿಂದ ಕಟ್ಟೆಚ್ಚರ ನೀಡಲಾಗಿದ್ದು, ಸ್ವಲ್ಪ ಸಮಸ್ಯೆ ಉಂಟಾದರೂ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಇಲ್ಲಿ ಅಷ್ಟಾಗಿ ಮಳೆಯಾಗದಿದ್ದರೂ ಘಟ್ಟದ ಮೇಲ್ಭಾಗವಾದ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಶಿರಸಿ, ಯಲ್ಲಾಪುರದಲ್ಲಿ ಮಳೆಯಾದರೆ ಅದು ನೇರವಾಗಿ ಪರಿಣಾಮ ಉಂಟಾಗುವುದು ಅಂಕೋಲಾ ಮತ್ತು ಕುಮಟಾ ತಾಲೂಕಿಗೆ. ಇಲ್ಲಿ ನೀರು ಉಕ್ಕಿ ಹರಿಯುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದರ ಜತೆಗೆ ನೆರೆಯೂ ಕೂಡ ಉಂಟಾಗುತ್ತದೆ. ಹೀಗಾಗಿ ಮನೆ ಮುಳುಗಡೆ ಸೇರಿದಂತೆ ಪ್ರಾಣಹಾನಿಯಾಗುವ ಸಾಧ್ಯತೆಯೂ ದಟ್ಟವಾಗಿರುತ್ತದೆ.
ಗಂಗಾವಳಿ ನದಿಗೆ ನೆರೆ ಉಂಟಾದಾಗಲೆಲ್ಲ ಸಾವು-ನೋವುಗಳು ಉಂಟಾಗುತ್ತಿದೆ. ಹೀಗಾಗಿ ನದಿ ತಟದ ಜನರು ಭಯದಿಂದಲೇ ವಾಸಿಸುವಂತಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಮಳೆಯಾದರೆ ಅದರ ದುರಂತ ಈ ಭಾಗದ ಮೇಲಾಗುತ್ತದೆ. ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೂಡ ಆಗಾಗ ಮಾಹಿತಿಯನ್ನು ಪಡೆಯುತ್ತಿದ್ದಾರೆ.