ಶಿರಸಿ: ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆಯು ಅರಣ್ಯ ಹಕ್ಕು ಮಾನ್ಯತೆಗೆ ಹಾಗೂ ಪರಿಸರ ವಿರೋಧವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರ ವಿರೋಧ ವ್ಯಕ್ತಪಡಿಸುವುದಲ್ಲದೇ, ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಧಾನ ಮಂತ್ರಿಯವರಿಗೆ ಆಗ್ರಹಿಸಿದ್ದಾರೆ.
ಅವರು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ-2023ರ ಪ್ರತಿಯನ್ನು ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.
ತಲತಲಾಂತರದಿಂದ ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿದಾರರ ಅರಣ್ಯ ಭೂಮಿ ಹಕ್ಕಿಗೆ ಮಂಜೂರಿ ದಿಶೆಯಲ್ಲಿ ಕೇಂದ್ರ ಸರಕಾರವು ಹಿತಾಸಕ್ತಿಯನ್ನ ಪ್ರದರ್ಶಿಸದೇ, ಸಮುದಾಯ ಹಕ್ಕು, ಅರಣ್ಯವಾಸಿಗಳ ಮತ್ತು ಅರಣ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೇ ಮೂಲ ಕಾನೂನಿನ ತತ್ವಸಿದ್ಧಾಂತಕ್ಕೆ ವ್ಯತಿರಿಕ್ತವಾಗಿರುತ್ತದೆ. ತಿದ್ದುಪಡಿಯು ಉದ್ಯೋಗಿಕರಣ, ಗಣಿಗಾರಿಕೆ, ಕಲ್ಲಿದ್ದಲು ಮುಂತಾದ ಉದ್ದೇಶದ ಅರಣ್ಯೇತರ ಮತ್ತು ಪರಿಸರ ವಿರೋಧಿ ಚಟುವಟಿಕೆಗೆ ಕಾನೂನನ್ನೇ ತಿದ್ದುಪಡಿ ಮಾಡಲು ಕೇಂದ್ರ ಸರಕಾರ ಹೊರಟಿರುವುದು ಖಂಡನಾರ್ಹ ಎಂದು ಅವರು ಹೇಳಿದರು.
ತಿದ್ದುಪಡಿ ಮಸೂದೆ ಕಾರ್ಪೋರೇಟ್ ಪರ: ವೈಯಕ್ತಿಕ ಅರಣ್ಯ ಭೂಮಿ ಹಕ್ಕಿನ ಮಂಜೂರಿಗೆ ವ್ಯತಿರಿಕ್ತವಾಗಿರುವ ತಿದ್ದುಪಡಿ ಮಸೂದೆಯು ಕಾರ್ಪೋರೇಟ್ ಮತ್ತು ಉದ್ಯಮಿಗಳ ಹಿತಾಸಕ್ತಿಗೆ ಪೂರಕವಾಗಿರುವ ಕಾನೂನು ಜಾರಿ ಮಾಡಲು ಕೇಂದ್ರ ಸರಕಾರ ಪ್ರಯತ್ನಿಸಿರುವುದು ವಿಷಾದಕರ. ಅಲ್ಲದೇ, ತಿದ್ದುಪಡಿ ಮಸೂದೆಯು ಭಾರತೀಯ ಅರಣ್ಯ ಪ್ರದೇಶದ ಏಕಾಗ್ರತೆಯ ಅಭಿವೃದ್ದಿಗೆ ಮಾರಕವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಮಂಜುನಾಥ ಕಲಕೈ, ಗೋಪಾಲ ತ್ಯಾರ್ಸಿ, ವೆಂಕಟ್ರಮಣ ಗೊದ್ದಲಮನೆ, ವಿಜಯಕುಮಾರ, ಅಣ್ಣಪ್ಪ ಸಂಪಖಂಡ, ತಾರಾನಾಥ ಹೇರೂರ್, ಗೋದಾವರಿ ಬಿ.ಆರ್. ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.