ಶಿರಸಿ: ಕೃಷಿಕರ ಜೀವನಾಡಿಯಾಗಿರುವ ಟಿಎಸ್ ಎಸ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.35 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ ಎಂದು ಕಾರ್ಯಕಾರಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ತಿಳಿಸಿದರು.
ಈ ವರ್ಷ ಟಿಎಸ್ಎಸ್ ಸಂಸ್ಥೆಯಲ್ಲಿ 91990 ಕ್ವಿಂಟಾಲ್ ಅಡಕೆ ವಹಿವಾಟು ನಡೆಸಲಾಗಿದೆ. 396 ಕೋಟಿ ರೂ. ಗೂ ಅಧಿಕ ಮೌಲ್ಯದ ಅಡಕೆ ಹಾಗೂ 47.49 ಕೋಟಿ ರೂ.ನ ಸಿಹಿ ಅಡಕೆ ಪುಡಿ ಮಾರಾಟ ಮಾಡಲಾಗಿದೆ ಎಂದರು. ಸಂಘ ರೈತ ರಕ್ಷಾ ಕವಚ ಯೋಜನೆಯಿಂದ 1496 ಜನರಿಗೆ 3.8 ಕೋಟಿ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಋಣಮುಕ್ತ ಯೋಜನೆಯಲ್ಲಿ 21 ಮೃತರ ಸಾಲ ಬಾಕಿಗೆ 50 ಲಕ್ಷ ರೂ. ಬಳಕೆ ಮಾಡಲಾಗಿದೆ ಎಂದರು.
ಸಂಘ ಈ ವರ್ಷ ಶೇರು ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಟ್ ಘೋಷಿಸಲಾಗಿದೆ. ಕಿರಾಣಿ ಹಾಗೂ ಸುಪರ್ ಮಾರ್ಕೆಟ್ ನಲ್ಲಿ 328 ಕೋಟಿ ರೂ. ವಹಿವಾಟಾಗಿದೆ. ಸದಸ್ಯರಿಗೆ 38.77 ಕೋಟಿ ರೂ. ಆರ್ಥಿಕ ಸೌಲಭ್ಯ ಒದಗಿಸಲಾಗಿದೆ ಎಂದರು.
ಹಿಂದಿನ ವಾರ್ಷಿಕ ಸಭೆಯಲ್ಲಿ ಸದಸ್ಯರಿಗೆ ಸಾಲ ಮಂಜೂರಾತಿ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಸಂಘದ ನಿಯಮಾವಳಿಯ ಪ್ರಕಾರ ಸಾಲ ಮಂಜೂರಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘವು ಆಸಾಮಿ ಕೃಷಿ ಅಭಿವೃದ್ಧಿ ಸಾಲದ ಖಾತೆಯನ್ನು ಠೇವು ಭದ್ರತಾ ಸಾಲ (10.5%ಬಡ್ಡಿದರ), ಮಹಸೂಲು ಭದ್ರತಾ ಸಾಲ (11.5% ಬಡ್ಡಿದರ), ಉತ್ಪಾದನಾ ಸಾಲ (12,5% ಬಡ್ಡಿದರ) ಹಾಗೂ ಹೆಚ್ಚುವರಿ ಸಾಲ (13.5% ಬಡ್ಡಿದರ) ಎಂದು ನಾಲ್ಕು ಖಾತೆಗಳಾಗಿ ವರ್ಗೀಕರಣ ಮಾಡಲಾಗಿದೆ. ಪ್ರತಿ ಸಾಲಕ್ಕೂ ಬೇರೆ ಬೇರೆ ಬಡ್ಡಿದರ ನಿಗದಿಪಡಿಸುವುದರ ಮೂಲಕ ಸದಸ್ಯರಿಗೆ ಬಡ್ಡಿದರ ಭಾರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇವೆ. ಇನ್ನು ಕೆಲವು ತುರ್ತು ವೈದ್ಯಕೀಯ ಸಂದರ್ಭದಲ್ಲಿ ಮಾತ್ರ
ಮಾನವೀಯತೆಯ ಮೇಲೆ ಹಣ ನೀಡಲಾಗುತ್ತಿದೆ.
ಹಿಂದಿನ ವರ್ಷದಲ್ಲಿ ಸಂಘದಿಂದ ಬೆಳೆಸಾಲ ತುಂಬಿಕೊಡಲಾಗಿಲ್ಲ. ಈ ಬಗ್ಗೆ ಸದಸ್ಯರಿಂದ ತೀವ್ರ ಆಕ್ಷೇಪ ಕೂಡ ವ್ಯಕ್ತವಾಗಿರುತ್ತದೆ. ಸಂಘವು ಈ ನಿರ್ಧಾರಕ್ಕೆ ಬರಲು ಸದಸ್ಯರೇ ಕಾರಣೀಕರ್ತರಾಗಿದ್ದಾರೆ ಎಂದರು.
ನಮ್ಮ ಸಂಘದ ಸದಸ್ಯರೇ ಕೆ.ಡಿ.ಸಿ.ಸಿ. ಬ್ಯಾಂಕ್ಗೆ ಸಂಘದ ಸಾಂಪತ್ತಿಕ ಸ್ಥಿತಿ ಬಗ್ಗೆ ಇಲ್ಲಸಲ್ಲದ ಆಪಾದನೆ ಮಾಡಿ ಪತ್ರ ಬರೆದು ಸಂಘಕ್ಕೆ ಸಾಲ ಮಂಜೂರಿಗೆ ತೊಂದರೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಸದಸ್ಯರ ಮನೆ ಮನೆಗಳಿಗೆ ಹೋಗಿ ಸಂಘದಲ್ಲಿ ಠೇವಣಿ ಇರಿಸದೇ ಸಾಲ ಮಾತ್ರ ಪಡೆಯುವಂತೆ ಹೇಳಿ ಸಂಘದ ಸದಸ್ಯರಿಗೆ ಹಾದಿ ತಪ್ಪಿಸುವ ಕೆಲಸವನ್ನು ಸಹ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮಂಜೂರಿಯಾದ
ಬೆಳೆಸಾಲ ಸದಸ್ಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತಿರುವುದರಿಂದ ಸಂಘವು ತುಂಬಿಕೊಟ್ಟ ಬೆಳೆಸಾಲ ಸರಿಯಾಗಿ ಹಿಂದಿರುಗಿ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ನಿರ್ದೇಶಕರಾದ ಚಂದ್ರಶೇಖರ ಹೆಗಡೆ, ಗಣಪತಿ ರಾಯ್ಸದ್, ಅಣ್ಣಪ್ಫ ಗೌಡ, ಶಶಾಂಕ ಹೆಗಡೆ, ಶಾರದಾ ಹೆಗಡೆ, ನಾರಾಯಣ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ಇತರರಿದ್ದರು.
“ಹಂತ ಹಂತವಾಗಿ ರೈತರ ಸಾಲದ ಭಾದೆಯನ್ನು ಕಡಿಮೆ ಮಾಡಿ ಸದಸ್ಯರನ್ನು ಕಾಲಮಿತಿಯಲ್ಲಿ ಅವರ ಆದಾಯದ ಪರಿಧಿಯೊಳಗೆ ತಂದು ಸದಸ್ಯರಲ್ಲಿ ಆರ್ಥಿಕ ಶಿಸ್ತು ಬೆಳೆಸುವುದು ನಮ್ಮ ಉದ್ದೇಶ”. – ರಾಮಕೃಷ್ಣ ಹೆಗಡೆ ಕಡವೆ