ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ಈ ವರ್ಷವು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. 2 ಎಕರೆಯ ವಿಸ್ತೀರ್ಣದಷ್ಟು ಕೆಂಪು ಕಲ್ಲಿನ ಬಂಡೆಯನ್ನೊಳಗೊ0ಡ ಗುಡ್ಡದ ಕೆಳಗಡೆ 50 ಕ್ಕಿಂತ ಹೆಚ್ಚಿನ ಕುಟುಂಬಗಳು ವಾಸವಾಗಿದ್ದು ಕಳೆದೆರಡು ವರ್ಷದಲ್ಲಿ ಮಳೆಗಾಲದಲ್ಲಿ ಬಂಡೆ ಧರೆಗುರುಳಿತ್ತು. ಈ ಬಾರಿಯು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು ಆತಂಕದಲ್ಲೆ ಮಳೆಗಾಲದಲ್ಲಿ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಕಳೆದೆರಡು ದಿನದಿಂದ ಎಡಬಿಡದೆ ಮಳೆಯು ಸುರಿಯುತ್ತಿರುದರಿಂದ ಅಲ್ಲಲ್ಲಿ ಮಣ್ಣು ಕುಸಿದು ಆತಂಕ ಹೆಚ್ಚು ಮಾಡಿದೆ. ಕಳೆದ ವರ್ಷವು ಇದೇ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿತ್ತು.
ಗುಡ್ಡ ಪ್ರದೇಶದ ಕೆಳಗಡೆ ಹಲವು ದಶಕಗಳಿಂದ 60ಕ್ಕೂ ಹೆಚ್ಚಿನ ಕುಟುಂಬ ವಾಸ್ತವ್ಯ ಮಾಡಿಕೊಂಡಿದ್ದು ಗುಡ್ಡ ಕುಸಿತವಾದರೆ ಮನೆಗೆ ಹಾನಿ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಪ್ರತಿ ವರ್ಷ ಉಸ್ತುವಾರಿ ಸಚೀವರು ಶಾಸಕರು, ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಗಣಿ ಇಲಾಖೆ, ಕಂದಾಯ, ನೋಡೆಲ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಬಿಟ್ಟರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಗುಡ್ಡ ಕುಸಿತದ ಸ್ಥಳಕ್ಕೆ ಗುರುವಾರ ಸ್ಥಳಕ್ಕೆ ಭಟ್ಕಳ್ ಉಪವಿಭಾಧಿಕಾರಿ ಡಾ. ನಯನಾ ಎನ್, ನೋಡಲ್ ಅಧಿಕಾರಿ ಸವಿತಾ ದೇವಾಡಿಗ, ತಹಸೀಲ್ದಾರ್ ರವಿರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಗೌಡ, ಸದಸ್ಯ ಸುರೇಶ ಗೌಡ, ಅಣ್ಣಪ್ಪ ಗೌಡ, ಪಿ ಡಿ ಓ, ಕಂದಾಯ ಇಲಾಖೆ ಮತ್ತು ಇತರ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಆಗಮಿಸಿ ಈ ವರ್ಷ ಸರಿಯಾಗಲಿದೆ. ಮಳೆಗಾಲ ಮುಗಿಯಲಿ ಎಂದು ಹೇಳುತ್ತಾರೆ. ಮುಂದಿನ ವರ್ಷದ ಮಳೆಗಾಲದ ಅವಧಿಯಲ್ಲಿ ಆ ಅಧಿಕಾರಿಗಳು ಬದಲಾವಣೆ ಆಗುವುದು ಬಿಟ್ಟರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುವುದು ಈ ಭಾಗದ ನಿವಾಸಿಗಳ ಆರೋಪವಾಗಿದೆ.