ಸಿದ್ದಾಪುರ: ಗಿಡಗಳನ್ನು ನೆಡುವ ಪರಿಪಾಠವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಕ್ಷೇತ್ರದ ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಕಾಡಿದ್ದರೆ ನಾಡು ಎನ್ನುವ ಮಾತೊಂದಿದೆ.ನಾಡು ಸುಭಿಕ್ಷವಾಗಿರಬೇಕೆಂದರೆ ಅರಣ್ಯ ಬೆಳೆಸಬೇಕು. ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಹೆಮ್ಮರವಾಗಿಸಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ.ನಾಯ್ಕ ಹೇಳಿದರು.
ಅವರು ಪಟ್ಟಣದ ನೆಹರೂ ಮೈದಾನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಸಕ್ತ ಶೇಕಡಾ 21 ರಷ್ಟಿರುವ ಕರ್ನಾಟಕದ ಹಸಿರು ಹೊದಿಕೆಯನ್ನು 33% ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮಾಡಿರುವ ಸಂಕಲ್ಪಕ್ಕೆ ಅನುಗುಣವಾಗಿ ಜುಲೈ 1 ರಿಂದ 7ರವರೆಗೆ ನಡೆಯಲಿರುವ ವನಮಹೋತ್ಸವದ ಭಾಗವಾಗಿ ಗಿಡ ನೆಡಲಾಯಿತು.
ಈ ಸಂದರ್ಭದಲ್ಲಿ ಶಿರಸಿ ಡಿ.ಎಫ್.ಓ ಅಜ್ಜಯ್ಯ ಜೆ.ಆರ್., ಎಸಿಎಫ್ ಸಿ.ಎನ್.ಹರೀಶಕುಮಾರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕುನ್ನೂರ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಉಪ ತಹಶೀಲ್ದಾರ ಡಿ.ಎಂ.ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ, ವಿನಾಯಕ,ಪಟ್ಟಣ ಪಂಚಾಯತ ಸದಸ್ಯರುಗಳಾದ ಸುಧೀರ ಎಸ್.ನಾಯ್ಕ, ವೆಂಕೋಬ, ಪ್ರಮುಖರಾದ ಎಚ್.ಕೆ.ಶಿವಾನಂದ,ಸತೀಶ.ಎಸ್.ಗೌಡರ್ ಹೆಗ್ಗೋಡಮನೆ ಮತ್ತಿತರರು ಉಪಸ್ಥಿತರಿದ್ದರು.