ಶಿರಸಿ: ಶಿಕ್ಷಣ ಕ್ಷೇತ್ರ ಪೈಪೋಟಿಯಲ್ಲಿರುವುದರಿಂದ ಈ ಕ್ಷೇತ್ರವನ್ನು ಕೇವಲ ಉದ್ಯಮವಾಗಿಸದೇ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕರು ಹಾಗೂ ಎಂಇಎಸ್ ಉಪಾಧ್ಯಕ್ಷರೂ ಆಗಿರುವ ಭೀಮಣ್ಣ ಟಿ.ನಾಯ್ಕ ತಿಳಿಸಿದರು.
ಅವರು ಶನಿವಾರ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂಇಎಸ್ ಸಂಸ್ಥೆಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆ ಕಂಡುಕೊಂಡಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಕ್ರಾಂತಿಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಣ ಸಂಸ್ಥೆಗಳು ಪೈಪೋಟಿ ಒಡ್ಡುವ ಆತುರದಲ್ಲಿ ಶಿಕ್ಷಣ ಗುಣಮಟ್ಟವನ್ನು ಮರೆಯಬಾರದೆಂದು ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಶಿಕ್ಷಣ ಗುಣಮಟ್ಟ ಮಟ್ಟಿಗೆ ಎರಡು ಮಾತಿಲ್ಲ. ಒಂದು ಕಾಲದಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣದ ಗುಣಮಟ್ಟಕ್ಕಾಗಿ ಬೇರೆಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾಗಿತ್ತು. ಈಗ ಕಾಲ ಬದಲಾಗಿದ್ದು, ಬೇರೆಬೇರೆ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಜಿಲ್ಲೆಗೆ ಬಂದು ಶಿಕ್ಷಣ ಕಲಿಯುವಂತಾಗಿದೆ. ಇದಕ್ಕೆ ಇಲ್ಲಿಯ ಶಿಕ್ಷಣ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರು ಕಾರಣವಾಗಿದೆ ಎಂದರು.
ಜನರು ನನಗೆ ಶಾಸಕರಾಗಿಸಿ ಮುಳ್ಳಿನ ಖುರ್ಚಿಯಲ್ಲಿ ಕುಳಿಸಿದ್ದೀರಿ. ಆದ್ದರಿಂದ ನಾನು ಆ ಖುರ್ಚಿಯ ಮಹಿಮೆ ಅರಿತು ಬಹಳಷ್ಟು ಜವಾಬ್ದಾರಿಯಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅಧಿಕಾರ ಬಂದವನಿಗೆ ಅಹಂ ಬರಲೇಬಾರದು. ನನಗೆ ಅಹಂ ಎನ್ನುವುದು ಹಿಂದೆಯೂ ಇಲ್ಲ. ಈಗ ಅಧಿಕಾರ ಬಂದಾವಗಲೂ ಇಲ್ಲ. ನನಗೆ ಅಹಂನಿAದ ದೂರವಿರುವಂತೆ ಮಾಡುವ ಜವಾಬ್ದಾರಿ ಜನರ ಮೇಲಿದೆ ಎಂದರು. ಈ ಸಂಸ್ಥೆಯ ಉಪಾಧ್ಯಕ್ಷನಾಗಿ ಈ ಸಂಸ್ಥೆಯ ಬಗ್ಗೆ ನನ್ನ ಜವಾಬ್ದಾರಿಯ ಅರಿವು ನನಗಿದೆ ಎಂದ ಅವರು, ಈ ಸಂಸ್ಥೆಯ ಉಪಾಧ್ಯಕ್ಷನಾಗಿ ಶಾಸಕನಾಗಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು ಎಂಇಎಸ್ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯಿರುವ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಎಂಇಎಸ್ ಬ್ರೊಚರ್ ಬಿಡುಗಡೆ ಮಾಡಿದರು. ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಬೇಕಾದ ಹತ್ತು ಹಲವಾರು ಕೆಲಸಗಳು ಶಾಸಕರಿಂದಾಗಬೇಕಾಗಿದ್ದು, ಅವರು ಸ್ಪಂದಿಸುತ್ತಾರೆನ್ನುವ ಅಚಲವಾದ ವಿಶ್ವಾಸವಿದೆ ಎಂದರು. ವೇದಿಕೆಯಲ್ಲಿ ಎಂಇಎಸ್ ಕಾರ್ಯದರ್ಶಿ ಎಸ್.ಪಿ.ಶೆಟ್ಟಿ, ಉಪಾಧ್ಯಕ್ಷ ಡಾ.ಎಂ.ಜಿ.ಹೆಗಡೆ ಉಪಸ್ಥಿತರಿದ್ದರು. ಡಾ.ಆರ್.ಎನ್.ಹೆಗಡೆ ಬಂಡಿಮನೆ ವೆಬ್‌ಸೈಟ್ ಬಗ್ಗೆ ಮಾಹಿತಿ ನೀಡಿದರು. ಎಸ್.ಕೆ.ಭಾಗವತ್ ಸ್ವಾಗತಿಸಿದರು. ಪ್ರೊ.ವಿನಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.