ಯಲ್ಲಾಪುರ: ಜೂನ್ ತಿಂಗಳು ಮುಗಿಯುತ್ತಾ ಬಂದಿದ್ದರೂ, ಈವರೆಗೆ ಮಳೆಯ ಮುನ್ಸೂಚನೆಯೂ ಕಾಣುತ್ತಿಲ್ಲ. ಹೀಗಾಗಿ ತಾಲೂಕಿನ ರೈತರು ತೀವ್ರ ಆತಂಕಗೊಂಡಿದ್ದು, ಭವಿಷ್ಯದ ಕುರಿತಾಗಿ ಚಿಂತಾಕ್ರಾಂತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರವನ್ನು ಬರಪೀಡಿತ ತಾಲೂಕೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕೆಂದು ತಾಲೂಕಿನ ರೈತ ಮುಖಂಡ ಪಿ.ಜಿ.ಭಟ್ ಬರಗದ್ದೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಯಕ್ಕೆ ಬಹುತೇಕ ಜಮೀನುಗಳಲ್ಲಿ ಭತ್ತ ಬಿತ್ತನೆಯ ಕಾರ್ಯ ಮುಗಿಯುತ್ತಿತ್ತು. ಆದರೆ ಈ ವರ್ಷ ಭತ್ತ ಬಿತ್ತನೆ, ನಾಟಿ, ಕಾರ್ಯಗಳಿಗೆ ನೀರಿನ ಕೊರತೆ ಕಂಡುಬಂದಿದೆ. ತಾಲೂಕಿನಾದ್ಯಂತ ಅಡಿಕೆ ಬೆಳೆಗಾರರ ಪರಿಸ್ಥಿತಿಯೂ ಬಿಗಡಾಯಿಸಿದೆ. ಈವರೆಗೂ ಮಳೆ ಬಾರದೇ ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್ ತಲುಪಿ ಜನಜೀವನದ ಮೇಲೆ ಪರಿಣಾಮ ಉಂಟಾಗಿದ್ದು, ಅಧಿಕವಾಗಿ ಬೆಳೆಯುತ್ತಿದ್ದ ತೆಂಗು, ಹಲಸು ಹಾಗೂ ಮಾವಿನ ಫಸಲಿನ ಮೇಲೆಯೂ ಹವಾಮಾನ ಪರಿಣಾಮ ಬೀರಿದೆ. ಇದು ರೈತರನ್ನು ಕಂಗೆಡಿಸಿದೆ ಎಂದರು.
ಹಿರಿಯ ಕೃಷಿಕ ಜಿ.ಎಸ್.ಭಟ್ ಬರಗದ್ದೆ ಇದ್ದರು.