ಯಲ್ಲಾಪುರ: ಮುಂಡಗೋಡ ತಾಲೂಕಿನ ಮರಮಟ್ಟು ಸಂಗ್ರಹಾಲಯದಲ್ಲಿ ಕಟ್ಟಿಗೆ ಕಳುವು ಪ್ರಕರಣದಲ್ಲಿ ಭಾಗಿಯಾದ ಅರಣ್ಯ ಅಧಿಕಾರಿಗಳನ್ನು ಬಂಧಿಸಬೇಕು. ಗುಂಜಾವತಿಯಲ್ಲಿ ಮರಗಳನ್ನು ಕಡಿದು ವಾಹನಗಳ ಮೂಲಕ ಸಾಗಿಸಿದ್ದು, ಇದರಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪರಿಸರ ಪ್ರೇಮಿ ಶಮಶುದ್ದೀನ್ ಮಾರಕರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ರವಾನಿಸಿ ಆಗ್ರಹಿಸಿದ್ದಾರೆ.
ಕಳೆದ 8 ದಿನಗಳ ಹಿಂದೆ ಮುಂಡಗೋಡ ಮರಮುಟ್ಟು ಸಂಗ್ರಹಾಲಯದಲ್ಲಿ ಅಕ್ರಮವಾಗಿ ನಾಟಾಗಳನ್ನು ಕದ್ದು ಮಾರಲು ಪ್ರಯತ್ನಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ ಅವರನ್ನು ಇನ್ನೂವರೆಗೆ ಬಂಧಿಸದೆ ಇರುವುದು ಖೇದನಿಯ, ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಮುಂಡಗೋಡ ಮಂಚಿಕೇರಿ ಕಾತೂರಿನಿಂದ ಅಕ್ರಮವಾಗಿ ನಾಟಾಗಳು ಸಾಗಾಟವಾಗಿವೆ ಎಂದು ಮಾಧ್ಯಮಗಳಲ್ಲಿ ಬರೆಯಲಾಗಿದೆ. ಈ ವ್ಯಾಪ್ತಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಗುಂಜಾವತಿಯ ಅರಣ್ಯ ಪ್ರದೇಶದಿಂದ ಸಾಗವಾನಿ ಮರದ ತುಂಡುಗಳು ಬೊಲೆರೊ ಮತ್ತು ಟಾಟಾ ಏಸ್ ವಾಹನಗಳಲ್ಲಿ ಸಾಗಾಟ ಮಾಡಲಾಗಿದೆ. ತುಂಬಲು ಬಾರದ ಕೆಲವು ಮರದ ತುಂಡುಗಳು ಅಲ್ಲೇ ಬಿಟ್ಟು ಹೋಗಿದ್ದನ್ನು ಅರಣ್ಯ ಅಧಿಕಾರಿಗಳು ಇಲಾಖೆಯಲ್ಲಿ ಜಮಾ ಮಾಡಿದ್ದಾರೆ. ಅಧಿಕಾರಗಳು ಕರ್ತವ್ಯದಲ್ಲಿ ಲೋಪವೆಸಗಿದಲ್ಲದೆ. ನಿಷ್ಕಾಳಜಿ ತೋರಿದ್ದಾರೆ. ತಕ್ಷಣ ಅಂತಹ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ವಿನಂತಿಸಿದ್ದಾರೆ. ಆರೋಪಿತ ಅಧಿಕಾರಿಗಳನ್ನು 8 ದಿನಗಳಲ್ಲಿ ಬಂಧಿಸದೆ ಇದ್ದಲ್ಲಿ ಕಾರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪರಿಸರ ಪ್ರೇಮಿಗಳಿಂದ ಪ್ರತಿಭಟನೆ ನೆಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.