ಸಿದ್ದಾಪುರ: ಉದ್ಯೋಗ ಖಾತರಿ ಯೋಜನೆಯಲ್ಲಿ ಉತ್ತಮವಾಗಿ ಕೊಂಡೊಯ್ಯುವಲ್ಲಿ ಮನುವಿಕಾಸ ಸಂಸ್ಥೆಯ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ. ವೇತನ ವಿಳಂಬ ಆಗುತ್ತಿದೆ ಎಂಬುದು ಕೇವಲ ಗಾಳಿಮಾತಾಗಿದೆ. ಈ ಯೋಜನೆಯಲ್ಲಿ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತರಿಯ ಅನುಷ್ಠಾನ ಮಾಡಲು ಜನರು ನಮ್ಮೊಟ್ಟಿಗೆ ಕೈ ಜೋಡಿಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ಮನುವಿಕಾಸ ಸಂಸ್ಥೆಯ ವತಿಯಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಆಯ್ದ ಫಲಾನುಭವಿಗಳಿಗೆ ಅಗತ್ಯ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷರಾದ ಶಶಿಭೂಷಣ ಹೆಗಡೆ ಮಾತನಾಡಿ, ಮನರೇಗಾ ಎಂಬುದು ಒಂದು ಐತಿಹಾಸಿಕ ಹೆಜ್ಜೆ. ಯೋಜನೆ ರೂಪಿತಗೊಂಡಿದ್ದು 1991ರಲ್ಲಿ, ಜಾರಿಗೆ ಬಂದಿದ್ದು 2005ರಲ್ಲಿ. ಉದ್ಯೋಗ ಪ್ರತಿಯೊಬ್ಬನ ಹಕ್ಕು ನರೇಗಾ ಉದ್ಯೋಗವನ್ನು ಕೊಡುವುದರೊಟ್ಟಿಗೆ ಸಾಮಾಜಿಕ ಭದ್ರತೆಯನ್ನು ಸಹ ಒದಗಿಸಿದೆ. ಉದ್ಯೋಗ ಖಾತರಿ ಯೋಜನೆಯು ಸಿದ್ದಾಪುರ ಮುಂದೆ ಇಡಿ ರಾಜ್ಯಕ್ಕೆ ಮಾದರಿಯಾಗಲಿ ಎಂದರು.
ಎಪಿಎoಸಿ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗದ ಭದ್ರತೆಯೊಂದಿಗೆ ಖಾತರಿ ಇದೆ. ಇದು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಇದೆ ಜನಪರ ಅತ್ಯಂತ ಮಹತ್ವದ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯೋಗ ಖಾತರೀ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿದ 100 ಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರಿಗೆ ಉಚಿತವಾಗಿ ಗುದ್ದಲಿ, ಪಿಕಾಸಿ ಮತ್ತು ಬುಟ್ಟಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಐ.ಈ.ಕುನ್ನೂರು, ಯುವ ಮುಖಂಡರಾದ ಪ್ರಶಾಂತ ನಾಯ್ಕ ಹೊಸೂರು, ಬೇಡ್ಕಣಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಉಮೇಶ ನಾಯ್ಕ ಕಡಕೇರಿ, ಇಟಗಿ ಗ್ರಾ.ಪಂ ಅಧ್ಯಕ್ಷ ಸುರೇಂದ್ರ ಗೌಡ ಸೇರಿದಂತೆ ಮನುವಿಕಾಸ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ಟ ಪ್ರಾಸ್ತಾವಿಕ ಮಾತನಾಡಿದರು.