ಅಂಕೋಲಾ: ಶ್ರೀನಾರಾಯಣಗುರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಪರಿಶುದ್ಧ ವಾತಾವರಣ ನಿರ್ಮಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇಂತಹ ಮಹಾನ್ ಚೇತನರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಾರಾಯಣ ಗುರುಗಳ ಹೋರಾಟ ವೈಚಾರಿಕತೆಯಿಂದ ಕೂಡಿದ್ದು, ಅಂತಹ ಮನಸ್ಥಿತಿಯನ್ನು ನಾವು ಕೂಡ ಹೊಂದಿರಬೇಕು ಎಂದು ಯುವ ಮುಖಂಡ ರಮಾನಂದ ನಾಯ್ಕ ಕೊಂಡಳ್ಳಿ ಹೇಳಿದರು.
ತಾಲೂಕಿನ ಗುಂಡಬಾಳ ಕೊಂಡಳ್ಳಿಯಲ್ಲಿ ಹಮ್ಮಿಕೊಂಡ ‘ಶ್ರೀ ನಾರಾಯಣ ಗುರುಗಳ ವೈಚಾರಿಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಮಾಜದಲ್ಲಿ ಸಮಾನರಾಗಿ ಬದುಕಬೇಕು. ಬೇದ-ಭಾವಗಳಿಲ್ಲದೇ ಜೀವಿಸಿದಾಗ ಮಾತ್ರ ಬದುಕು ಸಮೃದ್ಧವಾಗಲು ಸಾಧ್ಯ. ಹೀಗಾಗಿ ಯುವಕರು ತಮ್ಮ ಜೀವನದಲ್ಲಿ ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಮಾತನಾಡಿ, ಶ್ರೀನಾರಾಯಣ ಗುರುಗಳು ಕೇರಳದಲ್ಲಿ ಮಾಡಿದ ಕ್ರಾಂತಿ ನಿಜಕ್ಕೂ ಅದೊಂದು ಐತಿಹಾಸಿಕವಾದದ್ದು. ಹಿಂದುಳಿದ ವರ್ಗ, ದೀನದಲಿತರ ಪರವಾಗಿ ನಿಂತು ಹೋರಾಟ ಮಾಡಿ ಅವರಿಗೂ ಕೂಡ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಮಾದೇವ ನಾಯ್ಕ ಬಾಳೆಗುಳಿ, ಯುವ ಘಟಕದ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ ಬೆಳಂಬಾರ, ಖಜಾಂಚಿ ಶ್ರೀಪಾದ ನಾಯ್ಕ ಮಂಜಗುಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ಪ್ರಮುಖರಾದ ರಾಜೇಶ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.