ದಾಂಡೇಲಿ: ಅಖಿಲ ಭಾರತ ಜಿಎಸ್‌ಬಿ ಸಮಾಜದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ನಗರದ ಟೌನಶಿಪ್ ನಿವಾಸಿ ನಿಕಿತಾ ನವೀನ್ ಕಾಮತ್ ಈಕೆ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ನಗರಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಮಂಜೇಶ್ವರದ ಶ್ರೀವಿಭುದೇಂದ್ರ ಕಲಾ ಮಂಟಪದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ನಗರದ ಉದ್ಯಮಿ ನವೀನ್ ಕಾಮತ್ ಮತ್ತು ನಿವೇದಿತಾ ಕಾಮತ್ ದಂಪತಿಗಳ ಸುಪುತ್ರಿಯಾಗಿರುವ ನಿಕಿತಾ ಕಾಮತ್ ಪ್ರಸಕ್ತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರಥಮ ವಾಣಿಜ್ಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಮಂಗಳೂರು ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈಗಾಗಲೆ ವಿವಿಧೆಡೆಗಳಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿ ಬಹುಮಾನಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆಗೆ ಪಾತ್ರಳಾಗಿರುವ ನಿಕಿತಾಳ ಸಾಧನೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.