ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ತಾಲೂಕು ವ್ಯಾಪ್ತಿಯ ಬಳಗಾರ ಕ್ರಾಸ್ ಬಳಿ ನೀರು ಹರಿದು ಹೋಗಲು ಹೆದ್ದಾರಿಗೆ ಅಡ್ಡವಾಗಿ ನಿರ್ಮಿಸಲಾದ ಸೇತುವೆ ಒಂದು ಬಾರಿ ವಾಹನ ಓಡಾಟದಿಂದ ಜರ್ಜರಿತವಾಗಿ ಶಿಥಿಲವಾಗಿದೆ ಎಂದು ಸ್ಥಳೀಯ ನಿವಾಸಿ ವಿಘ್ನೇಶ್ವರ ಗಾಂವ್ಕರ ಎನ್ನುವವರು ಆರೋಪಿಸಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಮೋರಿ ಇದೇ ಸ್ಥಿತಿಯಲ್ಲಿಯಿದೆ. ಬಾರಿವಾಹನ ಮೋರಿ ಅಥವಾ ಸೇತುವೆ ಮೇಲೆ ಓಡಾಡುವ ಸಮಯದಲ್ಲಿ ಮೋರಿ ಕುಸಿದು ಬೀಳುವ ಸಾಧ್ಯತೆ ಇದೆ. ಆಗ ಅಂಕೋಲಾ ಹಾಗೂ ಯಲ್ಲಾಪುರ ಮಧ್ಯದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಸೇತುವೆಯ ಎರಡು ಬದಿಗೆ ತಡೆಗೋಡೆ ಇಲ್ಲದೇ ಇರುವುದರಿಂದ ಬಹಳಷ್ಟು ವಾಹನಗಳು ಸೇತುವೆ ಕೆಳಗೆ ಉರುಳಿ ಬಿದ್ದಿರುವ ಉದಾಹರಣೆಯಿದೆ. ಹಲವಾರು ಅಪಘಾತಗಳು ಸಂಭವಿಸಿದಾಗಲೂ ಕೂಡ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಅಧಿಕಾರಿಗಳು, ಈ ಕುರಿತು ಗಮನಹರಿಸದೆ ಇರುವುದು ವಿಪರ್ಯಾಸವಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಅಪಾಯ ಸಂಭವಿಸುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಿಥಿಲಗೊಂಡಿದೆ ಎನ್ನಲಾದ ಸೇತುವೆಯನ್ನು ದುರಸ್ತಿ ಮಾಡುವುದು ಸಾರ್ವಜನಿಕರ ಹಿತ ದೃಷ್ಟಿಯಿಂದ ಉತ್ತಮ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.