ಮುಂಡಗೋಡ: ಕೂಲಿಕಾರರಿಗೆ ಉದ್ಯೋಗ ನೀಡುವುದರೊಂದಿಗೆ ಅವರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಸೋಮವಾರ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಯಿತು.
ತಾಲೂಕಿನ ಮಳಗಿ ಗ್ರಾಮ ಪಂಚಾಯತ್‌ನ ಹುಣಸಿಕಟ್ಟೆ ಕೆರೆ ಹಾಗೂ ನಾಗನೂರು ಗ್ರಾಮ ಪಂಚಾಯತ್ ನ ಕಲಕೇರಿ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ಬಿಪಿ, ಶುಗರ್, ರಕ್ತದೊತ್ತಡ ಹಾಗು ಮೈಕೈ ನೋವು, ನೆಗಡಿ, ಕೆಮ್ಮು, ಜ್ವರ, ಪರೀಕ್ಷೆ ಮುಂತಾದ ಪ್ರಾಥಮಿಕ ಚಿಕಿತ್ಸೆ ನಡೆಸಿ ಅಗತ್ಯವಿರುವ ಮಾತ್ರೆಗಳನ್ನು ನೀಡಿ ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಎಲ್ ಮರಾಠೆ ಹಾಗೂ ಛಬ್ಬಿ ಸೋಮನಿಂಗಪ್ಪಾ, ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಕೆ.ಹೆಚ್.ಪಿ.ಟಿ ತಾಲೂಕು ಸಂಯೋಜಕರು, ಡಾ.ಸುಮಿತ್ ಪ್ರಾಥಮಿಕ ಆರೋಗ್ಯ ಕೇಂದ್ರ ಮಳಗಿ, ಡಾ.ಮೇಘನಾ ಪ್ರಾಥಮಿಕ ಆರೋಗ್ಯ ಕೇಂದ್ರ ಕಾತೂರು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.