ಕಾರವಾರ: ತಾಲ್ಲೂಕಿನ ಅಮದಳ್ಳಿಯ ಪ್ರೇಮ ಆಶ್ರಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಜ್ಯದ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿ ವೇತನ ವಿತರಿಸುವ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಹೆಮ್ಮೆಯ ಟ್ರಸ್ಟ್ ಆಗಿ ಮೂಡಿ ಬಂದಿದೆ.
ತಾಲ್ಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 2022-23ರ ಶೈಕ್ಷಣಿಕ ಸಾಲಿನಲ್ಲಿ 770 ವಿದ್ಯಾರ್ಥಿಗಳಿಗೆ 9,38,000 ರೂ.ಗಳ ವಿದ್ಯಾರ್ಥಿ ವೇತನ ನೀಡಲಾಗಿದೆ. ಯಾವುದೇ ಪ್ರಚಾರವಿಲ್ಲದೆ ಇಲ್ಲಿಯವರೆಗೆ 8000 ವಿದ್ಯಾರ್ಥಿಗಳಿಗೆ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿ ವೇತನವನ್ನು ವಿತರಿಸಿ ತನ್ನ ಹೆಗ್ಗಳಿಕೆಯನ್ನು ಹೆಚ್ಚಿಸಿಕೊಂಡಿದೆ.
ಟ್ರಸ್ಟಿನ ಮುಖ್ಯ ಧ್ಯೇಯವಾದ ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯ ಮಾಡುವುದು ಎಂಬ ಆಶಯದಂತೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ ಆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಯಾವುದೇ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಗತ್ಯತೆಗೆ ಸಂಬಂಧಿಸಿದಂತೆ ವಿನಂತಿ ಮಾಡಿಕೊಂಡ ತಕ್ಷಣ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿ ಶಿಕ್ಷಣದ ಅನುಕೂಲ ಮಾಡಿಕೊಡುತ್ತಿರುವದು ನಿಜವಾಗಿಯೂ ಶ್ಲಾಘನೀಯವಾಗಿದೆ.