ಕಾರವಾರ: ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ವಿಶೇಷ ಕಾರ್ಯಕ್ರಮವನ್ನು ರೂಪಿಸಿ ಜನರಿಗೆ ಕೂಲಿ ಜೊತೆಗೆ ಆರೋಗ್ಯ ಭಾಗ್ಯ ನೀಡುತ್ತಿದೆ.
ತಾಲೂಕಿನ ದೇವಳಮಕ್ಕಿ ಹಾಗೂ ಮಾಜಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ರಾಜ್ಯದಲ್ಲಿ ಒಟ್ಟು 25 ಲಕ್ಷ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಿದ್ದು, ಜಿಲ್ಲೆಯಲ್ಲಿ 1 ಲಕ್ಷ 15 ಸಾವಿರ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಗುರಿ ಹೊಂದಲಾಗಿದೆ. ಈ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯುಬ ಗ್ರಾಮೀಣ ಜನರ ಆರೋಗ್ಯಕ್ಕೆ ಒತ್ತು ನೀಡಿ ಉಚಿತ ತಪಾಸಣೆಯಂತಹ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ.
ನರೇಗಾ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿರುವ ಕೂಲಿಕಾರರ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಏಕ ಕಾಲಕ್ಕೆ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕೆ.ಎಚ್.ಪಿ.ಟಿ ತಾಲೂಕು ಸಂಯೋಜಕರು, ಐಇಸಿ ಸಂಯೋಜಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.