ಹಳಿಯಾಳ: ತಾಲೂಕಿಗಾಗಿಯೇ ಪ್ರತ್ಯೇಕ ‘ಆರ್.ವಿ.ದೇಶಪಾಂಡೆ ಗ್ಯಾರಂಟಿ’ ಘೋಷಣೆ ಮಾಡಿ ಕರಪತ್ರಗಳನ್ನು ತಮ್ಮ ಗೃಹ ಕಛೇರಿಯಲ್ಲಿ ಪಕ್ಷದ ಮುಖಂಡರುಗಳ ಸಮಕ್ಷಮದಲ್ಲಿ ದೇಶಪಾಂಡೆ ಬಿಡುಗಡೆಗೊಳಿಸಿದರು.
ಗ್ಯಾರಂಟಿಯಲ್ಲಿ ಹದಿಮೂರು ಕಾರ್ಯ ಯೋಜನೆಗಳಿದ್ದು, ಎಲ್ಲವನ್ನೂ ಗರಿಷ್ಠ ಎರಡು ವರ್ಷದ ಮಿತಿಯೊಳಗೆ ಪ್ರತಿಶತ ನೂರರಷ್ಟು ಸಾಧಿಸಿಯೇ ತೀರುತ್ತೇನೆ ಎಂದರಲ್ಲದೇ, ಈಗ ಕೊಟ್ಟಿರುವ ಯಾವುದೆ ಗ್ಯಾರಂಟಿಗಳು ನನ್ನ ವೈಯುಕ್ತಿಕವಾಗಿದೆ. ಈ ಹಿಂದಿನ ನನ್ನ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ತಾಳೆ ಹಾಕಿದರೆ ಈ ಗ್ಯಾರಂಟಿಗಳು ತೀರಾ ಅತ್ಯಲ್ಪ ಮಟ್ಟದ್ದಾಗಿರುವುದರಿಂದ ಸಾಧಿಸಲು ಯಾವುದೇ ರೀತಿಯ ಕಷ್ಟವಿಲ್ಲವಾಗಿದೆ ಎಂದರು.
ಚುನಾವಣೆ ಎನ್ನುವುದು ಕ್ರಿಕೆಟ್ ಆಟದಂತೆ ಇದ್ದು, ಯಾವತ್ತೂ ಕ್ರೀಡಾಸ್ಫೂರ್ತಿ ಮತ್ತು ಮನೋಭಾವ ಇರಬೇಕಾಗಿದ್ದು, ವೈಯಕ್ತಿಕವಾಗಿ ಯಾರೂ ಯಾರನ್ನೂ ಹೀಗಳೆಯಬಾರದು ಎಂದರು. ರೈತರು ತೆಗೆದುಕೊಂಡಿದ್ದ ಬೆಳೆಸಾಲ ತುಂಬಲು ಏ.30 ಕೊನೆ ದಿನವಾಗಿದ್ದು, ಕೆಲ ರೂತರು ತುಂಬಿದ್ದು ಇನ್ನು ಕೆಲ ರೈತರ ಆರ್ಥಿಕ ಪರಿಸ್ಥಿತಿ ಮದುವೆ, ಊರ ಜಾತ್ರೆಗಳ ನಡುವೆ ಗಂಭೀರವಾಗಿದ್ದು, ಬೆಳೆಸಾಲ ತುಂಬುವ ದಿನಾಂಕ ಇನ್ನೂ ಎರಡು ತಿಂಗಳುಗಳ ಕಾಲಾವಕಾಶ ನೀಡುವಂತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಮಾಡಿದ್ದೇನೆಂದರು.
ಈ ಸಂದರ್ಭದಲ್ಲಿ ಸುಭಾಶ ಕೊರ್ವೇಕರ, ಅಜರ ಬಸರಿಕಟ್ಟಿ, ಸಂತೋಷ ರೇಣಕೆ, ಶಂಕರ ಬೆಳಗಾಂವಕರ, ಸತ್ಯಜಿತ ಗಿರಿ, ಕೈತಾನ ಬಾರಬೋಜ, ದೇಮಾನಿ ಶಿರೋಜಿ, ಅನಿಲ ಚವ್ಹಾಣ, ಉಮೇಶ ಬೋಳಶೆಟ್ಟಿ, ಕೃಷ್ಣಮೂರ್ತಿ, ಗಜಾಕೋಶ, ಫಯಾಜ ಶೇಖ್ ಮತ್ತಿತರ ಮುಖಂಡರು ಇದ್ದರು.