ಕುಮಟಾ: ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಅಂಕೋಲಾಕ್ಕೆ ಆಗಮಿಸಲಿದ್ದು, ಮೂರು ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಒಂದು ಹಂತದ ಕರಪತ್ರಗಳ ವಿತರಣೆ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಮೇ 3ರಂದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಅಂಕೋಲಾ ತಾಲೂಕಿನ ಟೋಲ್ ಗೇಟ್ ಸಮೀಪದ ಗೌರಿ ಕೆರೆಯ ಪ್ರದೇಶದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸಲಿದ್ದಾರೆ. ಅಂದು 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕರ್ತರಿಗೆ ಇದೊಂದು ಸಂಭ್ರಮದ ಕ್ಷಣವಾಗಿದ್ದು, ಈ ಸಮಾವೇಶಕ್ಕೆ ಸಮಸ್ತ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಮಾತನಾಡಿ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಅವರನ್ನು ಟೀಕಿಸಿರುವುದನ್ನು ಬಿಜೆಪಿ ಜಿಲ್ಲಾ ಘಟಕ ಖಂಡಿಸುತ್ತದೆ. ಪ್ರಧಾನಿ ಸೀಟ್ ಗಾಂಧಿ ಕುಟುಂಬದ ಗದ್ದುಗೆಯಂತಾಗಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಇಡೀ ದೇಶದಲ್ಲಿ ಅಭಿವೃದ್ಧಿಯ ಚಿತ್ರಣವನ್ನೆ ಬದಲಾಯಿಸಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಮೋದಿ ವಿರುದ್ಧವಾಗಿ ಟೀಕೆಗಳನ್ನು ಮಾಡುತ್ತ ಬಂದಿದ್ದಾರೆ. ಇದು ಗಾಂಧಿ ಕುಟುಂಬದ ಚಾಳಿಯಾಗಿದೆ. ನಮ್ಮ ಪ್ರಧಾನಿಯನ್ನು ನಿಂದಿಸಿದರೆ, ಬಿಜೆಪಿ ಘಟಕವು ತೀಕ್ಷ್ಣವಾದ ಮಾತುಗಳಿಂದಲೇ ಉತ್ತರ ನೀಡಬೇಕಾಗಿದೆ ಎಂದು ಕಾಂಗ್ರೆಸ್‌ನ್ನು ಜರಿದರು.
ಇನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಗೆಲುವು ನಿಶ್ಚಿತ ಎಂದ ನಾಗರಾಜ ನಾಯಕರು, ಕಾಂಗ್ರೆಸ್ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಓರ್ವ ಅಭ್ಯರ್ಥಿಯನ್ನು ಈ ಕ್ಷೇತ್ರದ ಮತದಾರರ ಮೇಲೆ ಹೇರುವ ಕಾರ್ಯ ಮಾಡಿದೆ. ನಮ್ಮ ಕ್ಷೇತ್ರದ ಜನರು ಸಾವಿರಾರು ಕೋಟಿ ಅನುದಾನ ತಂದು ಅಭಿವ್ರದ್ದಿ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನೆ ನೋಡಿ ಗೆಲ್ಲಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಮಾಜಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಪ್ರಮುಖರಾದ ಎಂ.ಜಿ.ಭಟ್, ಶಶಿಭೂಷಣ ಹೆಗಡೆ, ಎಂ.ಎ0.ಹೆಗಡೆ, ಪ್ರಶಾಂತ ನಾಯ್ಕ, ಜಯಾ ಶೇಟ್, ರಜತ್ ಸಣ್ಣಮನೆ, ಇತರರು ಇದ್ದರು.