ಭಟ್ಕಳ: ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ನಮ್ಮ ಕಾರ್ಯಕರ್ತರು ನಮ್ಮ ಸರಕಾರದ ಅವಧಿಯಲ್ಲಿ ಭಟ್ಕಳದಲ್ಲಿ ನಡೆದ ಅಭಿವೃದ್ದಿಯನ್ನು ಮತದಾರರಿಗೆ ತಿಳಿಸಬೇಕು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ ಬಿಜೆಪಿಯವರು 5ವರ್ಷಗಳಿಂದ ಸುಳ್ಳು ಹೇಳೊಕೊಂಡು ಕಾಲಕಳೆದಿದ್ದಾರೆ. ನನ್ನ ಕಾಲದಲ್ಲಿ ಮಂಜೂರಾದ ಅನುದಾನಗಳನ್ನು ತಾವು ಮಾಡಿದ್ದೇವೆ ಇದು ತಾವು ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಕುಡಿಯುವ ನೀರಿನ ಯೋಜನೆ, ದಿವಂಗತ ಚಿತ್ತರಂಜನ ಹೆಸರಿನಲ್ಲಿ ಹೆಂಜಲೆಯಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಾಗಿದ್ದು, ಅದನ್ನು ಬಿ.ಜೆ.ಪಿ ಅವರು ತಾವು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇತ್ತೀಚಿಗೆ ಹಳೇ ಬಸ್ ನಿಲ್ದಾಣದಲ್ಲಿರುವ ರಿಕ್ಷಾ ಚಾಲಕರ ಗಣೇಶೋತ್ಸವ ಸಮಿತಿಗೆ ಜಾಗ ಮಂಜೂರಿ ಮಾಡಿದ್ದೇವೆ ಎಂದು ಮತ್ತೊಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಒಂದುವೇಳೆ ಜಾಗ ಮಂಜೂರಿ ಆಗಿದ್ದರೆ ಶಾಸಕರ ಕಾರ್ಯಕ್ಕೆ ಅಭಿನಂದಿಸುವೆ. ಆದರೆ ಅಧಿಕಾರಿಗಳು ಜಾಗ ಮಂಜೂರಿಯಾದ ಬಗ್ಗೆ ನಮಗೇ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಎಂದ ಶಾಸಕರು ಹಾಗಾದರೆ ಮಂಜೂರಿಯಾದ ಬಗ್ಗೆ ಅಧಿಕಾರಿಗಳಿಗೆ ಗೊತ್ತಿಲ್ಲ ಅಂದರೆ ಏನಿದರ ಅರ್ಥ ಎಂದರು. ನನ್ನ ಕ್ಷೇತ್ರದಲ್ಲಿ ನಾನು ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ಕಂಡಿದ್ದೇವೆ. ನನಗೆ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ ಎಂದರು.
ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಎಲ್.ಎಸ್.ನಾಯ್ಕ ಮಾತನಾಡಿ, ಈ ಶಾಸಕರು ನಮ್ಮವರು ಎಂದು ಹೇಳಿಕೊಳ್ಳಲು ಬೇಸರವಾಗುತ್ತದೆ. ನಾನು ಬಿಜೆಪಿ ಪಕ್ಷದಿಂದ ಹೊರ ಬಂದಾಗ ಅಧಿಕಾರಿಗಳನ್ನು ಮುಂದು ಮಾಡಿ ನನ್ನ ಮೇಲೆ ನೋಟೀಸ್ ಜಾರಿ ಮಾಡಿಸಿದ್ದಾರೆ. ಇವರಿಗೆ ತಾಕತ್ತು ಇದ್ದಲ್ಲಿ ಮುಂದೆ ನಾನು ಯಾರೆಂದು ತೋರಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಾಮಧಾರಿ ಯುವ ಮುಖಂಡ ಹಾಗೂ ಮಾವಳ್ಳಿ 2 ಗ್ರಾಮ ಪಂಚಾಯತ ಹಾಲಿ ಅಧ್ಯಕ್ಷ ರಾಘವೇಂದ್ರ ನಾಯ್ಕದಿವಗೇರಿ, ಕುರುಂದೂರು ಮಾಜಿ ಗ್ರಾಮ ಪಂಚಾಯತ ಸದಸ್ಯ ಗಣೇಶ ದೇವೇಂದ್ರ ನಾಯ್ಕ, ರಮೇಶ ನಾಗಪ್ಪ ನಾಯ್ಕ, ದೇವರಿಗಿ, ರಾಘವೇಂದ್ರ ನಾಯ್ಕ ದೀವಗಿರಿ, ಕಾಂತಾ ನಾಯ್ಕ, ದಿವಗಿರಿ, ಮಂಜುನಾಥ ನಾಯ್ಕ, ಸಂತೋಷ ನಾಯ್ಕ, ಸುಭಾಷ ನಾಯ್ಕ, ರಾಜು ನಾಯ್ಕ, ತುಳಸಿದಾಸ ನಾಯ್ಕ, ವಸಂತ ನಾಯ್ಕ, ದಿನೇಶ ಹರಿಕಾಂತ, ಸೀಲ್ವಿಸ್ಟಾರ, ಸೀತಾರಾಮ ದೇವಾಡಿಗ ಮುಂತಾದವರನ್ನು ಮಾಜಿ ಶಾಸಕ ಮಂಕಾಳ ವೈದ್ಯ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ನಾರಾಯಣ ನಾಯ್ಕ, ವಿಷ್ಣು ದೇವಾಡಿಗ ಮುಂತಾದವರು ಇದ್ದರು.