ಗೋಕರ್ಣ: ಕಳೆದ 5 ವರ್ಷಗಳಿಂದ ನಡೆಯುತ್ತಿರುವ ಮಂಜಗುಣಿ-ಗ0ಗಾವಳಿ ನಡುವಿನ ಸೇತುವೆ ಕಾಮಗಾರಿ ವಿಳಂಬವಾಗಿರುವುದರಿ0ದ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯರು ಅನೇಕ ಬಾರಿ ಮನವಿಯನ್ನು ನೀಡಿದ್ದರು. ಏ.6ರಂದು ತಹಸೀಲ್ದಾರ್ ಕಚೇರಿಗೆ ಮನವಿಯನ್ನು ಸಲ್ಲಿಸಿದ್ದು, ಅದರಂತೆ ತಕ್ಷಣ ಕೆಲಸ ಆರಂಭಿಸುವ0ತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಗುತ್ತಿಗೆ ಪಡೆದ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಅನೇಕ ಬಾರಿ ಕಾಮಗಾರಿ ತೀವ್ರಗತಿಯಲ್ಲಿ ಮುಗಿಸುವಂತೆ ಮೌಖಿಕವಾಗಿ ಹೇಳಿದ್ದರು ಕೂಡ ಕಾರ್ಮಿಕರ ಕೊರೆತೆಯ ಕಾರಣ ನೀಡಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಈ ಭಾಗಕ್ಕೆ ಆಗುತ್ತಿರುವ ತೊಂದರೆಗಳ ಕುರಿತು ಪದೇ ಪದೇ ಹೋರಾಟ, ಮನವಿ ಸಲ್ಲಿಸುವದನ್ನು ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು, ಇನ್ನುಮುಂದೆ ಮತ್ತೆ ಕಾಮಗಾರಿ ವಿಳಂಬ ಮಾಡುತ್ತ ಹೋದರೆ ಜನರು ಕೂಡ ಸುಮ್ಮನೆ ಇರುವುದಿಲ್ಲ ಎಂದು ಅವರು ಸಲ್ಲಿಸಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮನವಿ ಸಲ್ಲಿಸಿದ ಮಂಜಗುಣಿ ಸ್ಥಳೀಯರಾದ ಶ್ರೀಪಾದ ಟಿ.ನಾಯ್ಕ, ನಾಗರಾಜ ಎಂ. ಇವರಿಗೆ ನೋಟಿಸ್ ನೀಡಿದ ದಾಖಲೆಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಹುಬ್ಬಳ್ಳಿ ಕಚೇರಿಯಿಂದ ಕಾರ್ಯಪಾಲಕ ಇಂಜಿನಿಯರ್ ಪ್ರತೀಕ ಪ್ರತಿಯನ್ನು ಕಳುಹಿಸಿ ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಇನ್ನಾದರೂ ರಸ್ತೆ ಕಾಮಗಾರಿಯನ್ನು ನಿರ್ಮಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಡಬೇಕೆಂದು ಎಚ್ಚರಿಸಿರುವುದರಿಂದ ಈಗಾದರೂ ಕಂಪನಿಯವರು ಜಾಗೃತರಾಗಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡ ಶ್ರೀಪಾದ ನಾಯ್ಕ ಎಚ್ಚರಿಸಿದ್ದಾರೆ.