ಅಂಕೋಲಾ: ಶೃಂಗೇರಿ ಶಾರದಾ ಪೀಠದ 37 ನೇ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ವಿಜಯ ಯಾತ್ರೆ ಅಂಗವಾಗಿ ಮೇ 1ರಂದು ಅಂಕೋಲೆಗೆ ಆಗಮಿಸಲಿದ್ದು, ಮೇ 3ರವರೆಗೆ ಅಂಕೋಲಾದಲ್ಲಿಯೇ ವಾಸ್ತವ್ಯ ಇರಲಿದ್ದಾರೆ ಎಂದು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಸ್ವಾಗತ ಸಮಿತಿಯ ಅಧ್ಯಕ್ಷ ಪಾಂಡುರಂಗ ವಿ.ಶೆಟ್ಟಿ ಕಾಂಜನ್ ಹೇಳಿದರು.
ಕಾಕರಮಠದ ಶ್ರೀವಿಠ್ಠಲ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಕಾರ್ಯಕ್ರಮಗಳ ವಿವರ ನೀಡಿದರು. ಮೇ 1ರಂದು ಸೋಮವಾರ ಸಂಜೆ 5.30ಕ್ಕೆ ಅಂಕೋಲೆಗೆ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳ ಶುಭಾಗಮನವಾಗಲಿದೆ. ಶ್ರೀಗಳವರನ್ನು ಶ್ರೀವಿಠ್ಠಲ ಸದಾಶಿವ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು.
ಮೇ 2ರಂದು ಬೆಳಿಗ್ಗೆ 8 ಗಂಟೆಗೆ ಮಾಧವನಗರ ಕಂತ್ರಿಯ ಬಿಂದುಮಾಧವ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನೀಡಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಭಾವಿಕೇರಿಯ ವೈಶ್ಯ ಸಮಾಜದ ನಾಗದೇವತಾ ಕಟ್ಟೆಗೆ ಶ್ರೀಗಳು ಭೇಟಿ ನೀಡಲಿದ್ದು, ಅಲ್ಲಿ ವೈಶ್ಯ ಸಮಾಜದವರಿಂದ ಸ್ವಾಗತ ಮತ್ತು ಶ್ರೀಗಳಿಂದ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನೀಡೆಯಲಿದೆ. ಮಧ್ಯಾಹ್ನ 11ಕ್ಕೆ ಕೇಣಿಯ ಶ್ರೀಮಹಾಸತಿ ದೇವಸ್ಥಾನಕ್ಕೆ (ಗುರುಪೀಠ) ಶ್ರೀಗಳು ಭೇಟಿ ನೀಡಲಿದ್ದು ಬಂಟ ಸಮಾಜದವರಿಂದ ಸ್ವಾಗತ, ಭಿಕ್ಷಾವಂದನೆ ನಂತರ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ತೆಂಕಣಕೇರಿಯ ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಉಪ ನಾಡವರ ಸಮಾಜದವರಿಂದ ಶ್ರೀಗಳವರಿಗೆ ಸ್ವಾಗತ, ನಂತರ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನಡೆಯಲಿದೆ.]
ಸಂಜೆ 5 ಗಂಟೆಯಿಂದ ಶ್ರೀ ಆರ್ಯಾದುರ್ಗಾದೇವಿ ಸಂಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಶ್ರೀ ವಿಠಲ ಸದಾಶಿವ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳಿಗೆ ಅಂಕೋಲಾದ ಸಮಸ್ತ ಭಕ್ತಾದಿಗಳಿಂದ ಅಭಿವಂದನಾ ಕಾರ್ಯಕ್ರಮ, ಶ್ರೀಗಳಿಂದ ವಿಶೇಷ ಅನುಗ್ರಹಿತ ಪ್ರವಚನ ನಡೆಯಲಿದೆ. ಮೇ 3ರಂದು ಬುಧವಾರ ಬೆಳಿಗ್ಗೆ 8.30ರಿಂದ ಶ್ರೀವಿಠಲ ಸದಾಶಿವ ದೇವಸ್ಥಾನದಲ್ಲಿ ಶ್ರೀದೇವರಿಗೆ ಅಷ್ಟಬಂಧ, ಕಲಾಭಿವೃದ್ಧಿ ಮತ್ತು ಕುಂಭಾಭಿಷೇಕ, ಕನ್ನಡ ವೈಶ್ಯ ಸಮಾಜದವರಿಗೆ ಆಶೀರ್ವಚನ, ಬೆಳಿಗ್ಗೆ 10 ಗಂಟೆಗೆ ಜೈ ಶಾರದಾಂಬಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿ ಕಟ್ಟಡದ ಉದ್ಘಾಟನೆ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನಡೆಯಲಿದೆ.
ಬೆಳಿಗ್ಗೆ 10.30ರಿಂದ ಶ್ರೀ ವಿಠಲ ಸದಾಶಿವ ದೇವಸ್ಥಾನದಲ್ಲಿ ವಿವಿಧ ಸಮಾಜ ಭಾಂದವರಿಂದ ಪಾದಪೂಜೆ, ಸಮಷ್ಠಿ ಭಿಕ್ಷಾವಂದನೆ. ಭಕ್ತಾದಿಗಳಿಂದ ವೈಯಕ್ತಿಕ ಪಾದ ಪೂಜೆ ಹಾಗೂ ಭಿಕ್ಷಾವಂದನೆ. ನಂತರ ಶ್ರೀ ಶ್ರೀಗಳವರರಿಂದ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ. ಮಹಾಪ್ರಸಾದ ವಿತರಣೆ ನೆರವೇರಲಿದೆ. ಸಂಜೆ 4 ಗಂಟೆಗೆ ಅಂಕೋಲಾದಿಂದ ಕಾರವಾರಕ್ಕೆ ಹೋಗುವ ಸಂದರ್ಭದಲ್ಲಿ ಅವರ್ಸಾದಲ್ಲಿ ಕ್ಷತ್ರಿಯ ಕೋಮಾರಪಂತ ಸಮಾಜದ ವಿಜಯದುರ್ಗಾ ಸಮುದಾಯ ಭವನಕ್ಕೆ ಜಗದ್ಗುರುಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಭೇಟಿ ನೀಡಲಿದ್ದು, ಅಲ್ಲಿ ಭಕ್ತಾದಿಗಳಿಗೆ ಮಂತ್ರಾಕ್ಷತೆ ಮತ್ತು ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ನಾಗಾನಂದ ಬಂಟ, ಪ್ರದೀಪ ಬಿ.ನಾಯ್ಕ, ರವೀಂದ್ರ ಬಂಟ, ಶ್ರೀ ವಿಠ್ಠಲ ಸದಾಶಿವ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಶೆಟ್ಟಿ, ಕಾರ್ಯದರ್ಶಿ ಶೇಶಗಿರಿ ವಿ.ಶೆಟ್ಟಿ, ವೈವಾಟದಾರ ಕಿರಣ ಸುರೇಶ ಶೆಟ್ಟಿ, ಸದಸ್ಯ ಸುಹಾಸ ಶೆಟ್ಟಿ, ದೇವಸ್ಥಾನದ ಅರ್ಚಕ ಸುರೇಶಚಂದ್ರ ಭಾಟೆ ಇನ್ನಿತರರು ಇದ್ದರು.