ಕಾರವಾರ: ‘ನಮ್ಮ ಕಾರವಾರ ತಂಡ’ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು 6 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಏ.29ರಂದು ಯುವ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಂಡದ ಪ್ರಮುಖ ಶಿವಂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರೇ ಸೇರಿ ರಚಿಸಿದ ನಮ್ಮ ಕಾರವಾರ ತಂಡ ಪ್ರವಾಸೋದ್ಯಮ, ಸ್ಥಳೀಯ ವ್ಯವಹಾರ ಮತ್ತು ಕಲೆಯನ್ನು ಉತ್ತೇಜಿಸುತ್ತಿದೆ. ಅಲ್ಲದೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ನಮ್ಮ ತಂಡ ಕಳೆದ 6 ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿದೆ. ಸುಮಾರು 50ಕ್ಕೂ ಹೆಚ್ಚು ಯುವಕ ಯುವತಿಯರು ತಂಡದಲ್ಲಿದ್ದು, ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ, ಶಾಲೆ- ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿದ್ದು, ಇದೀಗ ಕಾರವಾರ ಯುವಕರಿಗೆ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಏ.29ರಂದು ನಗರದ ಜಿಲ್ಲಾ ರಂಗಮಂದಿರದಲ್ಲಿ ಯುವ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಯುವಕರಿಗೆ ಆಫ್ಲೈನ್, ಆನ್ಲೈನ್ ಕಾರ್ಯಕ್ರಮಗಳ ಮೂಲಕ ಸುಮಾರು 50 ಕ್ಕೂ ಹೆಚ್ಚು ವಿವಿಧ ಚಟುವಟಿಕೆ, ಸ್ಪರ್ಧೆ, ಹಾಡುಗಾರಿಕೆ, ನೃತ್ಯ ಮತ್ತು ಆಹಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಯುವಕರಿಗೆ ಅನುಕೂಲವಾಗುವಂತೆ ಏ.27ರಂದು ಅಮೃತ್ ಓರಾದಲ್ಲಿ ಮಾನಸಿಕ ಆರೋಗ್ಯ, ಪ್ರೀತಿ ಮತ್ತು ಸಂಬಂಧ ಹಾಗೂ ವೃತ್ತಿ ಮತ್ತು ಉದ್ಯಮಶೀಲತೆ ಕುರಿತು ಯುವ ಶೃಂಗಸಭೆ ಹಾಗೂ ಸಂವಾದ ನಡೆಯಲಿದ್ದು ನುರಿತರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈಗಾಗಲೇ 200ಕ್ಕೂ ಅಧಿಕ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಮುಖ್ಯ ಕಾರ್ಯಕ್ರಮ ಏ.29ಕ್ಕೆ ಸಂಜೆ 5 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ. ಇದೇ ವೇಳೆ ಜಾನಪದ ಸಂಸ್ಕೃತಿ ಪ್ರದರ್ಶನ, ಲೈವ್ ಬ್ಯಾಂಡ್ ಪ್ರದರ್ಶನ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಚಿತವಾಗಿ ನೋಂದಣಿ ಆನ್ಲೈನ್ ಹಾಗೂ ಆಪ್ಲೈನ್ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ತಂಡದ ಪ್ರಮುಖರಾದ ಸ್ವರೂಪ ತಳೇಕರ್, ಚೇತನಾ ಕೋಲ್ವೇಕರ್, ಅಶ್ವಿನ್ ಪಡವಳಕರ್, ವರುಣ್ ನಾಯ್ಕ, ಕ್ರಿಸ್ ಅಲ್ಮೇಡಾ, ದೀಪಕ ರೇವಣಕರ್, ಶ್ರೇಯಾ ನಾಯ್ಕ, ಶ್ರದ್ಧಾ ಕೋಲ್ವೇಕರ್, ಲಕ್ಷಿತಾ ಅಣ್ವೇಕರ್, ಅನುಶ್ರೇಯಾ ನಾಯ್ಕ ಇದ್ದರು.