ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ನಿವೇದಿತಾ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಶಾರದಾ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಅವರ ಮನೆಯಲ್ಲಿ ಪಕ್ಷದ ಹಲವು ವಿಭಾಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆ ಸೇರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಶಾರದಾ ಶೆಟ್ಟಿ, ದಿವಂಗತ ಮೋಹನ ಶೆಟ್ಟಿಯವರು ಕಾಂಗ್ರೆಸ್ ಪಕ್ಷವನ್ನ ಅತ್ಯಂತ ಕಷ್ಟಪಟ್ಟು ಕಟ್ಟಿಬೆಳೆಸಿ ಶಾಸಕನಾಗಿ ಕ್ಷೇತ್ರದ ಜನತೆಯ ಅಪಾರ ಪ್ರೀತಿ ವಿಶ್ವಾಸವನ್ನ ಗಳಿಸಿದ್ದರು. ಅವರ ನಿಧನದ ನಂತರ ಅವರ ಅಭಿವೃದ್ದಿ ಕನಸುಗಳನ್ನ ಸಾಕಾರಗೊಳಿಸಲು ನಾನು ಅವರ ಅಭಿಮಾನಿಗಳ ನಿರ್ಣಯದಂತೆ ಶಾಸಕಿಯಾಗಿ ಆಯ್ಕೆಯಾಗಿ, ಸಾವಿರಾರು ಕೋಟಿ ಅನುದಾನಗಳನ್ನು ತಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಚುನಾವಣೆಯಲ್ಲಿ ಸೋತಿದ್ದರೂ ಕಳೆದ ಐದು ವರ್ಷ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಟಿಕೆಟ್ ನೀಡುವ ಭರವಸೆ ನೀಡಿದ್ದರು.ಆದರೆ ಕೊನೆಯ ಕ್ಷಣದಲ್ಲಿ ಕ್ಷೇತ್ರದ ಪರಿಚಯವೇ ಇರದ ನಿವೇದಿತಾ ಆಳ್ವಾಗೆ ಟಿಕೆಟ್ ನೀಡಿದ್ದು ಬೇಸರ ಉಂಟುಮಾಡಿದೆ. ಪಕ್ಷದ ಕಾರ್ಯಕರ್ತರು ನಮ್ಮ ಉಳಿವಿನ ಸಲುವಾಗಿ ಪಕ್ಷೇತರರಾಗಿ ನಿಲ್ಲಬೇಕೆಂದು ಹಠ ಹಿಡಿದಿರುವುದರಿಂದ ಪಕ್ಷೇತರವಾಗಿ ಸ್ಪರ್ಧಿಸಲು ನಿಶ್ಚಯಿಸಿದ್ದೇನೆ ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.ಅಲ್ಲದೆ ಪಕ್ಷದ ಹಲವು ಪ್ರಮುಖ ಪದಾಧಿಕಾರಿಗಳು ಈ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದರು.
ಕಾಂಗ್ರೆಸ್ ಸೇವಾದಳ ತಾಲೂಕಾಧ್ಯಕ್ಷ ನಿತ್ಯಾನಂದ ನಾಯ್ಕ, ಬ್ರಿಗೇಡ್ ಸೇವಾದಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಕ್ಷಯ ನಾಯ್ಕ, ಕಾರ್ಮಿಕ ವಿಭಾಗದ ಮನೋಜ ನಾಯ್ಕ ತೊರ್ಕೆ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ ಬರ್ಗಿ, ತಾಲೂಕಾಧ್ಯಕ್ಷ ವಿಜಯ ವೆರ್ಣೇಕರ, ಪ್ರಚಾರ ಸಮಿತಿ ಸಂಚಾಲಕಿ ತಾರಾ ಗೌಡ, ಮಹಿಳಾ ತಾಲೂಕಾಧ್ಯಕ್ಷ ಸುರೇಖಾ ವಾರೇಕರ, ಹಿಂದುಳಿದ ವರ್ಗಗಳ ವಿಭಾಗದ ತಾಲೂಕಾಧ್ಯಕ್ಷ ಹನುಮಂತ ಪಟಗಾರ ಸೇರಿದಂತೆ 22 ಘಟಕಾಧ್ಯಕ್ಷರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು.