ಅಂಕೋಲಾ: ಪ್ರಾಚಿನ ಕಲೆಗಳಲ್ಲೊಂದಾದ ಕುಂಬಾರಿಕೆ ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ವಸ್ತುಗಳ ನಡುವೆ ಪೈಪೋಟಿ ಮಾಡಲಾಗದೇ ಅವನತಿಯತ್ತ ಸಾಗತೊಡಗಿದೆ. ಹೀಗಾಗಿ ಸಮೃದ್ಧ ಆರೋಗ್ಯಕ್ಕೆ ಸಹಕಾರಿಯಾಗಿದ್ದ ಮಣ್ಣಿನ ಮಡಿಕೆ ಕುಡಿಕೆಗಳು ಮೂಲೆ ಗುಂಪಾಗತೊಡಗಿದ್ದು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯತೆ ನಮ್ಮೆಲ್ಲರ ಮೇಲಿದೆ ಎಂದು ಪತ್ರಕರ್ತ ವಾಸುದೇವ ಗುನಗಾ ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮಡಕೆಯನ್ನು ಆಹಾರ ತಯಾರಿಸಲು, ನೀರು ತರಲು, ನೀರು ತುಂಬಿಡಲು ಸೇರಿದಂತೆ ಹಲವಾರು ರೀತಿಯಲ್ಲಿ ಉಪಯೋಗಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ವಸ್ತುಗಳು ಮಣ್ಣಿನ ಸಾಮಾಗ್ರಿಗಳ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ನಿರಂತರವಾಗಿ ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ವಸ್ತುಗಳ ಬಳಕೆಯಿಂದಾಗಿ ದೇಹದ ಮೇಲೆ ಹಲವಾರು ಹಾನಿಕಾರಕ ಪರಿಣಾಮಗಳನ್ನು ಜನರು ಎದುರಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಮಣ್ಣಿನ ಮಡಕೆಗಳ ಬಳಕೆಯಿಂದಾಗುವ ಆರೋಗ್ಯದ ಲಾಭಗಳು ಹಾಗೂ ಪ್ಲಾಸ್ಟಿಕ್, ಅಲ್ಯುಮಿನಿಯಂ ವಸ್ತುವಿನ ಬಳಕೆಯಿಂದ ಆಗುತ್ತಿರುವ ಹಾನಿಗಳ ಕುರಿತು ಅರಿವು ಮೂಡತೊಡಗಿದೆ. ಹೀಗಾಗಿ ಮತ್ತೆ ಮಣ್ಣಿನ ವಸ್ತುಗಳಿಗೆ ಬೆಲೆ ಬರುವಂತಾಗಿದೆ ಎಂದು ಹೇಳಿದರು.
ಪತ್ರಕರ್ತ ವಿಘ್ನೇಶ್ವರ ಗುನಗಾ ಮಾತನಾಡಿ, ಕುಲಕಸುಬಾಗಿರುವ ಕುಂಬಾರಿಕೆಯನ್ನು ವಿನೂತನ ರೀತಿಯಲ್ಲಿ ಆರಂಭಿಸಲು ಮುಂದಾಗಿರುವ ವಾಸುದೇವ ಗುನಗಾ ಅವರು ನಿರ್ಮಿಸಿರುವ ಕುಂಭ ಕುಟೀರದಲ್ಲಿ ಅತ್ಯಾಕರ್ಷಕ ನೀರಿನ ಹೂಜಿ, ಮಣ್ಣಿನ ಮಡಿಕೆ, ಮಣ್ಣಿನ ದೀಪ ಸೇರಿದಂತೆ ಮಣ್ಣಿನ ಅಲಂಕಾರಿಕ ವಸ್ತುಗಳು ದೊರೆಯುವಂತಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕುಂಭ ಕುಟೀರದ ಕಾರ್ಯದರ್ಶಿ ಅನುಪ ಗುನಗಾ ಉಪಸ್ಥಿತರಿದ್ದರು.
ಇಂದು ಉದ್ಘಾಟನೆ: ಸಮೀಪದ ಕುಂಬಾರಕೇರಿಯ ಶ್ರೀ ಕಳಸ ದೇವಸ್ಥಾನದ ಹಿಂಭಾಗದಲ್ಲಿರುವ ಕುಂಭ ಕುಟೀರ ಉದ್ಘಾಟನಾ ಸಮಾರಂಭ ಇಂದು ಏಪ್ರಿಲ್ 14ರ ಸಂಜೆ 4 ಗಂಟೆಗೆ ನಡೆಯಲಿದೆ. ಕ್ರಿಮ್ಸ್ನ ಡೀನ್ ಮತ್ತು ನಿರ್ದೇಶಕ ಡಾ. ಗಜಾನನ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪತ್ರಕರ್ತ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೆನರಾ ವೆಲ್ಫೆರ್ ಟ್ರಸ್ಟ್ ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ, ಜೈಹಿಂದ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪ್ರಭು, ಉದ್ಯಮಿ ಮಂಗಲದಾಸ ಕಾಮತ ಪಾಲ್ಗೊಳ್ಳುವರು.