ಭಟ್ಕಳ: ಬಂದರ್ ರೋಡ್ 2ನೇ ಕ್ರಾಸ್ನಲ್ಲಿ ಮನೆ ಮುಂದೆ ನಿಲ್ಲಿಸಿಟ್ಟ ಬುಲೆಟ್ ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಮೂಲದ ಕುಂಜೆಬೆಟ್ಟ ನಿವಾಸಿ ಇಮ್ರಾಜ್ ಉಸ್ಮಾನ್ ಸಾಹೇಬ್ ಹಾಗೂ ಬಂಟ್ವಾಳ ಫರಂಗಿಪೇಟೆ ಮೂಲದ ಮಹ್ಮದ್ ನೌಪಾಲ್ ಬಂಧಿತರು. ಇವರು ಮಾರ್ಚ್ 14ರ ನಸುಕಿನ ವೇಳೆ ಬಂದರ್ ರೋಡ್ 2ನೇ ಕ್ರಾಸ್ನಲ್ಲಿರುವ ನೀಲಾವರ ಅಪಾರ್ಟ್ಮೆಂಟ್ ಮುಂದೆ ನಿಲ್ಲಿಸಿಟ್ಟ ಶಝೀಬ್ ಹಶಿಮ್ ಎಂಬುವವರ ಬುಲೆಟ್ ಬೈಕ್ ಕಳವಾಗಿದೆ. ಬಳಿಕ ಬೆಳಿಗ್ಗೆ ಎದ್ದು ನೋಡಿದಾಗ ಮನೆಮುಂದೆ ನಿಲ್ಲಿಸಿಟ್ಟ ಬೈಕ್ ಕಳ್ಳತನವಾಗಿರುವುದು ತಿಳಿದುಬಂದಿದೆ. ನಂತರ ಈ ಕುರಿತು ಶಝೀಬ್ ಹಶಿಮ್ ಸಹೋದರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡ ವೇಳೆ ಬೈಕ್ ಕಳ್ಳತನ ಮಾಡಿದ ಕಳ್ಳರು ಕಳ್ಳತನವಾದ ಬೆಳಿಗ್ಗೆ 7.18ರ ಸುಮಾರಿಗೆ ಶಿರೂರು ಟೋಲ್ ಗೇಟ್ ಬಳಿ ಕಾರೊಂದಕ್ಕೆ ಕಳ್ಳತನ ಮಾಡಿದ ಬುಲೆಟ್ ಕಟ್ಟಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಕಳ್ಳರ ಜಾಡು ಹಿಡಿದ ಪೊಲೀಸರನ್ನು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಕಳ್ಳತನ ಮಾಡಿಕೊಂಡು ಮಂಗಳೂರಿಗೆ ಹೋಗಿದ್ದ ಕಳ್ಳರು ಮಾರ್ಚ್ 17ರಂದು ಬೈಕ್ ಚಲಾಯಿಸುತ್ತಿದ್ದ ವೇಳೆ ಅಲ್ಲಿನ ಟ್ರಾಫಿಕ್ ಪೊಲೀಸರು ದಾಖಲೆ ಇಲ್ಲದೆ ಬೈಕ್ ಚಲಾಯಿಸುತ್ತಿರುವ ಹಿನ್ನೆಲೆ ಬೈಕ್ ವಶಕ್ಕೆ ಪಡೆದು ಕದ್ರಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದರು. ಬಳಿಕ ಮತ್ತೆ ಮಾರ್ಚ್ 18ರಂದು ಕಳ್ಳರು ಅಲ್ಲಿಂದ ಬೈಕ್ ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮಾಲೀಕನ ಆರ್ಸಿ ಪರಿಶೀಲಿಸಿದಾಗ ಭಟ್ಕಳದಲ್ಲಿ ಬೈಕ್ ಕಳ್ಳತನವಾಗಿ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದ ಆಸಿಫ್ ಮಾಹಿತಿ ನೀಡಿದ್ದಾರೆ. ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಆರೋಪಿಗಳು ಬಿಡುಗಡೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.