ಕಾರವಾರ: ಮರಳಿನ ಸಮಸ್ಯೆ, ಮಾರ್ಚ್ ಅರ್ಥಿಕ ವರ್ಷ ಅಂತ್ಯಗೊAಡರೂ ಗುತ್ತಿಗೆದಾರರ ಬಿಲ್ ಪಾವತಿಯಾಗದಿರುವುದು ಸೇರಿದಂತೆ ಗುತ್ತಿಗೆದಾರರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಏ.12ರಂದು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಸಾಂಕೇತಿಕ ಧರಣಿ ಮಾಡಲು ನಿರ್ಧರಿಸಲಾಗಿದೆ ಎಂದು ಕಾರವಾರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಮಟ್ಟದಲ್ಲಿ ಅಧಿಕಾರಿಗಳ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡವರಿಗೆ ಬಿಲ್ ಪಾವತಿಯಾಗಿದೆ. ಕಾರವಾರ ಕ್ಷೇತ್ರದಲ್ಲಿ ಕಾಮಗಾರಿಯೇ ನಡೆಸದೇ ಬಿಲ್ ಪಡೆದುಕೊಂಡವರು ಕೂಡಾ ಇದ್ದಾರೆ. ಆದರೆ ಸಮರ್ಪಕವಾಗಿ ಕಾಮಗಾರಿ ನಡೆಸಿದವರಿಗೆ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಆದರೆ ಹೀಗೆ ಮುಂದುವರಿದರೆ ಬೆಳಗಾವಿಯ ಗುತ್ತಗೆದಾರ ಸಂತೋಷ ಪಾಟೀಲರಂತೆ ಎಲ್ಲಾ ಗುತ್ತಿಗೆದಾರರೂ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬಂದರೂ ಬರಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಸಂತೋಷ ಸೈಲ್, ಕಾರ್ಯದರ್ಶಿ ಅನಿಲ್ ಮಾಳಸೇಕರ, ಉದಯ ನಾಯ್ಕ, ರವೀಂದ್ರ ಕೇರಕರ, ರೋಹಿದಾಸ ಕೊಠಾರಕ್, ರಾಮನಾಥ ವಿಠೋಬಾ ನಾಯ್ಕ, ರೂಪೇಶ ನಾಯ್ಕ, ಛತ್ರಪತಿ ಮಾಳಸೇಕರ ಸೇರಿದಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇದ್ದರು.