ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಜೆಡಿಎಸ್ ಮೇಲೆ ಪ್ರೀತಿ ಇದೆ. ಚುನಾವಣೆ ಸಂದರ್ಭದಲ್ಲಿ ಅವರು ಯಾವ ನಿರ್ಧಾರವನ್ನು ಕೂಡಾ ತೆಗೆದುಕೊಳ್ಳಬಹುದು, ಅದು ಅವರ ಸ್ವಂತ ತೀರ್ಮಾನ. ಆದರೆ ಅವರು ಇನ್ನೂ ಪಕ್ಷ ಬಿಟ್ಟು ಹೋಗಿಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ಮತ್ತು ಮಾಧ್ಯಮ ಸಂಚಾಲಕ ಎಂ.ಬಿ.ಸದಾಶಿವ ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ ಅಸ್ನೋಟಿಕರ ಅವರು ಅಭ್ಯರ್ಥಿಯಾಗಿ ಘೋಷಣೆಯಾಗಿಲ್ಲ ಹೊರತು ಪಕ್ಷದಿಂದ ಎರಡೂ ಕಾಲನ್ನು ಹೊರಗೆ ಇಟ್ಟಿಲ್ಲ. ಹೀಗಾಗಿ ನಾವು ಕಾರವಾರ ಸೇರಿದಂತೆ ಹಲವೆಡೆ ಅಭ್ಯರ್ಥಿಗಳ ಘೋಷಣೆಗೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು 6 ಕ್ಷೇತ್ರಗಳಲ್ಲಯೂ ಸ್ಪರ್ಧೆ ಮಾಡುವುದು ಖಚಿತ. ಸದ್ಯ ಶಿರಸಿ, ಕುಮಟಾ ಹಾಗೂ ಹಳಿಯಾಳ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ರಾಜ್ಯದಲ್ಲಿ ಬಂಡಾಯ ಪರ್ವ ನಡೆಯುತ್ತಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏ.11, 12ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. 11ರಂದು ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಸಮಾವೇಶ ಮಾಡಲಿದ್ದಾರೆ. 12ರಂದು ಶಿರಸಿ ಹಾಗೂ ಕುಮಟಾ ಕ್ಷೇತ್ರದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಮೋಹಿನಿ ನಾಯ್ಕ, ಎಂ ಗಂಗಣ್ಣ, ಮುನಾಫ್ ಮಿರ್ಜಾನಕರ. ಸೈಯದ್ ಮೂಜಿದ್, ಕಾರವಾರ ತಾಲೂಕು ಘಟಕದ ಅಧ್ಯಕ್ಷ ಅಜಿತ್ ಪೋಕಳೆ, ಸಂದೀಪ್ ಬಂಟ್, ಖಲೀಲ್ ಉಲ್ಲಾ ಹಾಗೂ ರಘು ಇದ್ದರು.