ಗೋಕರ್ಣ: ದಕ್ಷಿಣದ ಕಾಶಿಯೆಂದೇ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಲ್ಲಿಯ ಪ್ರಮುಖ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತದೆ.
ಗಣಪತಿ ದೇವಸ್ಥಾನದಿಂದ ಶ್ರೀ ಮಹಾಬಲೇಶ್ವರ ದೇವಸ್ಥಾನ ದಾಟಿ ಕಡಲ ತೀರಕ್ಕೆ ತೆರಳುವ ದಾರಿ ಕಿರಿದಾಗಿರುವುದರಿಂದ ಪ್ರಯಾಣಿಕರಿಗೆ ಮತ್ತು ವಾಹನ ಸಂಚಾರರಿಗೆ ಕಿರಿ ಕಿರಿ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಗಿದೆ. ರಾಜ್ಯ ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪ್ರತಿನಿತ್ಯ ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.
ಕೆಲವು ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಿದ್ದಿರುವುದರಿಂದ ಕುಟುಂಬ ಸಮೇತವಾಗಿ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಿಗೆ ಬೇಟಿ ನೀಡುತ್ತಿದ್ದಾರೆ. ಹೀಗಾಗಿ ಧಾರ್ಮಿಕ ಮತ್ತು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುವಂತಾಗಿದೆ. ಇನ್ನೊಂದೆಡೆ ತಾಪಮಾನ ಏರಿಕೆಯಿರುವುದರಿಂದಾಗಿ ತಂಪು ಪಾನೀಯಗಳಿಗೆ ಬಹು ಬೇಡಿಕೆಯಿದೆ.
ಇನ್ನು ಸಮುದ್ರ ತೀರಗಳಲ್ಲಿ ಜೋಡಿ ಒಂಟೆಗಳಿದ್ದು, ಅದರ ಮೇಲೆ ಸವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರು ಒಂಟೆಯ ಮೇಲೆ ಕುಳಿತು ಮೋಜು ಮಸ್ತಿ ಮಾಡುತ್ತಿದ್ದಾರೆ. ಹಾಗೇ ಬೋಟ್‌ನಲ್ಲಿ ಪ್ರಯಾಣಿಸುವುದು. ಲೈಪ್ ಜಾಕೇಟ್ ಹಾಕಿಸಿ ದೋಣಿಯ ಮೂಲಕ ತೀರದಿಂದ 200 ಮಿ. ದೂರ ಸಾಗುವಷ್ಟರಲ್ಲಿ ಪ್ರವಾಸಿಗರನ್ನು ದೋಣಿಯಿಂದ ಬೀಳುವಂತೆ ಮಾಡಿ ಅವರನ್ನು ಮತ್ತೆ ದೋಣಿಯಲ್ಲಿ ಕರೆತರುವ ದುಸ್ಸಾಹಸಗಳು ಕೂಡ ಇಲ್ಲಿ ನಡೆಯುತ್ತಿರುವುದು ಕಂಡು ಬರುತ್ತದೆ.
ಬೀಚ್ ತುಂಬಾ ಪ್ರವಾಸಿಗರು ಕಂಡುಬರುತ್ತಿದ್ದು, ನೀರಿನಲ್ಲಿ ಈಜಾಡುವುದು, ಇನ್ನಿತರ ಮೋಜುಗಳನ್ನು ಮಾಡುತ್ತಿದ್ದಾರೆ. ಇನ್ನು ಹಲವಾರು ಬೀಚ್, ರೆಸಾರ್ಟ್ಗಳಲ್ಲಿ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದು, ಒಟ್ಟಿನಲ್ಲಿ ಗೋಕರ್ಣ ಪ್ರವಾಸಿಗರಿಂದ ತುಂಬಿಕೊ0ಡಿದೆ. ಇನ್ನು ಇತರೆ ಪರೀಕ್ಷೆಗಳು ಮುಗಿದ ನಂತರ ಇನ್ನಷ್ಟು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಹಾಗೇ ಬೀಚ್‌ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿಯಿoದ ಕ್ರಮ ಕೈಗೊಂಡಿದ್ದಾರೆ.