Slide
Slide
Slide
previous arrow
next arrow

ನಿವೇದಿತ್ ಆಳ್ವಾಕ್ಕೆ ಕಾಂಗ್ರೆಸ್ ಟಿಕೆಟ್ ಗುಮಾನಿ; ಕೈ ಕಾರ್ಯಕರ್ತರ‌ ಅಸಮಾಧಾನ

300x250 AD

ಕುಮಟಾ: ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಶಿರಸಿಯ ನಿವೇದಿತ್ ಆಳ್ವಾ ಅವರಿಗೆ ಬಹುತೇಕ ಫೈನಲ್ ಆಗಿರುವ ಸುದ್ದಿ ಕ್ಷೇತ್ರದಲ್ಲಿ ಹರಡುತ್ತಿದ್ದಂತೆ ಕಾರ್ಯಕರ್ತರಿಂದ ಆಳ್ವಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿಯೇ ಹೈವೊಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ವಿಧಾನಸಭಾ ಚುನಾವಣೆಯ ಚಿತ್ರಣವನ್ನು ನೋಡಿದಾಗ ಬಹಳ ಕಡಿಮೆ ಅಂತರದಿಂದ ಗೆಲುವಾಗಿರುವುದು ಮತ್ತು ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯೇ ಶಾಸಕರಾಗಿರುವುದು ಕಂಡುಬಂದಿದೆ. ಈ ಕ್ಷೇತ್ರದ ಇತಿಹಾಸಲ್ಲಿ ಬೇರೆ ಕ್ಷೇತ್ರದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ ದಾಖಲೆ ಇಲ್ಲ. ಹಾಗಂತ ಬೇರೆ ಕ್ಷೇತ್ರದವರು ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಎಂದಲ್ಲ. ಸ್ಪರ್ಧಿಸಿದರೆ ಸೋಲು ಖಚಿತ ಎಂಬುವಂತೆ ಈ ಕ್ಷೇತ್ರದ ಜನತೆ ಮತದಾನದ ಮೂಲವೇ ಉತ್ತರ ನೀಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. 2008ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಸಿದ್ದಾಪುರದ ಶಶಿಭೂಷಣ ಹೆಗಡೆ ಈ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ, ಹೀನಾಯ ಸೋಲು ಕಂಡಿದ್ದರು. ಅದರಲ್ಲೂ ಅವರೊಬ್ಬ ಪ್ರಭಾವಿ ಮಾಜಿ ಮುಖ್ಯಮಂತ್ರಿಯ ಪುತ್ರನಾದರೂ ಕ್ಷೇತ್ರದ ಜನರು ಅವರನ್ನು ನೆಚ್ಚಿಕೊಂಡಿಲ್ಲ. ಕ್ಷೇತ್ರದ ಮತದಾರರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ದಿನಕರ ಶೆಟ್ಟಿ ಅವರನ್ನು ಗೆಲ್ಲಿಸಿ, ಶಾಸಕ ಸ್ಥಾನದಲ್ಲಿ ಕೂರಿಸಿದ್ದರು. ಕೇವಲ 21 ಮತಗಳ ಅಂತರದಿಂದ ಮಾಜಿ ಶಾಸಕ ದಿ. ಮೋಹನ ಕೆ ಶೆಟ್ಟಿ ಅವರು ಸೋಲು ಕಂಡಿದ್ದರು.
2013ರ ಹೊತ್ತಿಗೆ ಮಾಜಿ ಶಾಸಕ ಮೋಹನ ಶೆಟ್ಟಿ ಅವರು ನಿಧನರಾದ ಕಾರಣ ಅವರ ಪತ್ನಿ ಶಾರದಾ ಮೋಹನ ಶೆಟ್ಟಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಜೆಡಿಎಸ್ ಅಭ್ಯರ್ಥಿ ದಿನಕರ ಶೆಟ್ಟಿ ಅವರನ್ನು ಕೇವಲ 420 ಮತಗಳಿಂದ ಸೋಲಿಸಿ, ಶಾರದಾ ಶೆಟ್ಟಿ ಅವರು ಶಾಸಕರಾಗಿದ್ದರು. 2018ರ ಚುನಾವಣೆ ಹೊತ್ತಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ದಿನಕರ ಶೆಟ್ಟಿ ಅವರಿಗೆ ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತಾ ಸಾವಿನ ಪ್ರಕರಣದಿಂದ ಉಂಟಾದ ಗಲಭೆಯು ಬಲ ತಂದುಕೊಟ್ಟಿತ್ತು. ಹಾಗಾಗಿ ದಿನಕರ ಶೆಟ್ಟಿ ಅವರು 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಆದರೆ ಈ ಬಾರಿ ಕಳೆದ ಅವಧಿಯಂತೆ ಬಿಜೆಪಿಪರ ಯಾವುದೇ ಅಲೆ ಇಲ್ಲ. ಬೆಲೆ ಏರಿಕೆ ಸೇರಿದಂತೆ ಇನ್ನಿತರೆ ಆಡಳಿತಾತ್ಮಕ ವಿರೋಧದ ಅಲೆ ಇದೆ. ಜೊತೆಗೆ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಕೂಡ ಈ ಬಾರಿ ಬಿಜೆಪಿಯನ್ನು ಬಾಧಿಸಲಿದೆ. ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ವಿಫುಲ ಅವಕಾಶವಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಮಾತ್ರ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದೆ. ಯಾರದೋ ಒತ್ತಡಕ್ಕೆ, ಲಾಬಿಗೆ ಮಣಿದು ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗೆ ಟಿಕೆಟ್ ನೀಡಿದರೆ ಖಂಡಿತ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲಕಚ್ಚುವ ಸಾಧ್ಯತೆ ಅಧಿಕವಾಗಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಮತವಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಅವರಿಗೆ ಫೈನಲ್ ಮಾಡಿರುವ ವಿಚಾರ ಕ್ಷೇತ್ರದಲ್ಲಿ ಹರಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಆಳ್ವಾ ಎಂಬ ಅಭಿಯಾನ ಕೂಡ ಶುರುವಾಗಿದೆ. ಕುಮಟಾ-ಹೊನ್ನಾವರ ತಾಲೂಕಿನ ವಿವಿಧೆಡೆ ಕಾರ್ಯಕರ್ತರು ಹೈಕಮಾಂಡ್ ನಿರ್ಣಯದ ವಿರುದ್ಧ ಕಿಡಿಕಾರುತ್ತಿರುವುದು ಕಂಡುಬಂದಿದೆ. ಪಕ್ಷವನ್ನು ಕ್ಷೇತ್ರದಲ್ಲಿ ಶ್ರಮ ವಹಿಸಿ ಕಟ್ಟಿದ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಕಾರ್ಯಕರ್ತರಿಂದ ವ್ಯಕ್ತವಾಗಿದ್ದು, ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ, ಪಕ್ಷದ ಶಿಸ್ತು, ಸಿದ್ದಾಂತವನ್ನು ಹೈಕಮಾಂಡ್ ಗಾಳಿಗೆ ತೂರಿದರೆ, ಅದರ ಪರಿಣಾಮವನ್ನು ಹೈಕಮಾಂಡ್ ಎದುರಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧವು ಹೈಕಮಾಂಡ್‌ಗೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆಯಂತೆ. ಆದರೆ ಮಾಜಿ ರಾಜ್ಯಪಾಲೆ ಪುತ್ರ ವ್ಯಾಮೋಹಕ್ಕೊಳಗಾಗಿ ಕುಮಟಾ ಕ್ಷೇತ್ರವನ್ನು ಬಲಿ ಕೊಟ್ಟಾದರೂ ತನ್ನ ಪುತ್ರನಿಗೆ ಟಿಕೆಟ್ ಕೊಡಿಸುವ ಜಿದ್ದಿಗೆ ಬಿದ್ದಿದ್ದಾರಂತೆ. ಇದರಿಂದ ಬಹುತೇಕ ಟಿಕೆಟ್ ಆಕಾಂಕ್ಷಿಗಳು ಸುಮ್ಮನಾಗಿದ್ದು, ಕಾರ್ಯಕರ್ತರ ವಿರೋಧದ ನಡುವೆ ಟಿಕೆಟ್ ತಂದರೆ, ಅದರ ಪರಿಣಾಮವನ್ನು ಆಳ್ವಾ ಅವರು ಎದುರಿಸಲೇ ಬೇಕು. ಕಾರ್ಯಕರ್ತರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಕಾಂಗ್ರೆಸ್‌ನ ಟಿಕೆಟ್ ಹಂಚಿಕೆಯ ಗೊಂದಲದಿಂದ ಕುಮಟಾ ಕ್ಷೇತ್ರ ಮತ್ತೆ ಕಾಂಗ್ರೆಸ್ ಕೈ ತಪ್ಪುವ ಎಲ್ಲ ಲಕ್ಷಣಗಳು ಕಂಡುಬಂದಿದ್ದು, ಇದರ ಲಾಭ ಜೆಡಿಎಸ್ ಮತ್ತು ಬಿಜೆಪಿ ಪಡೆದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಹೈಕಮಾಂಡ್ ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ಕುಮಟಾ ಕ್ಷೇತ್ರದ ಟಿಕೆಟ್ ಘೋಷಿಸದೇ ಕಾದುನೋಡುವ ತಂತ್ರ ಅನುಸರಿಸುತ್ತಿರುವ ಮಾಹಿತಿ ಇದೆ. ಒಟ್ಟಾರೆ ಕ್ಷೇತ್ರದಲ್ಲಿ ಉದ್ಭವಿಸಿದ ಟಿಕೆಟ್ ಗೊಂದಲ ಕಾಂಗ್ರೆಸ್ ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಗೆಲ್ಲುವ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆಯೋ..? ಅಥವಾ ಕಾರ್ಯಕರ್ತರ ವಿರೋಧದ ನಡುವೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಾಶೌಟ್ ಆದರೂ ಪರವಾಗಿಲ್ಲ ಎಂಬ ತಪ್ಪು ನಿರ್ಧಾರಕ್ಕೆ ಬದ್ಧರಾದ ಹೈಕಮಾಂಡ್, ಹೊರಗಿನ ವ್ಯಕ್ತಿಗೆ ಟಿಕೆಟ್ ಘೋಷಿಸುತ್ತದೆಯೋ..? ಎಂಬುದನ್ನು ಕಾದು ನೋಡಬೇಕಿದೆ.

300x250 AD
Share This
300x250 AD
300x250 AD
300x250 AD
Back to top