ಕಾರವಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕಾರಣಿಗಳು ಅಲರ್ಟ್ ಆಗಿದ್ದಾರೆ. ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೊನೆಗೂ ಕಣಕ್ಕೆ ಇಳಿದ್ದಿದ್ದು ಕ್ಷೇತ್ರದಲ್ಲಿ ಮುಖಂಡರ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೆಸರು ಘೋಷಣೆ ಮಾಡಿದ್ದು, ಪಕ್ಷದ ಕಚೇರಿ ಪ್ರಾರಂಭಿಸಿ ಪ್ರಚಾರ ಕಾರ್ಯದಲ್ಲಿ ಸೈಲ್ ತೊಡಗಿದ್ದಾರೆ. ಬಿಜೆಪಿ ಟಿಕೇಟ್ ಬಹುತೇಕ ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಎಂದಿದ್ದರು. ಇನ್ನು ಟಿಕೇಟ್ ಘೋಷಣೆಯಾಗದ ಹಿನ್ನಲೆಯಲ್ಲಿ ರೂಪಾಲಿ ನಾಯ್ಕ ಚುನಾವಣಾ ಅಖಾಡಕ್ಕೆ ಇಳಿದಿಲ್ಲ. ಈ ಬಾರಿ ತಾನು ಚುನಾವಣೆಗೆ ನಿಲ್ಲುವುದಿಲ್ಲ, ಕಾಂಗ್ರೆಸ್ ಸೇರುತ್ತೇನೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದರು. ಆದರೆ ಇನ್ನೂ ಕಾಂಗ್ರೆಸ್ ಸೇರದೇ ಮೌನವಾಗಿದ್ದ ಆನಂದ್ ಮಂಗಳವಾರದಿಂದ ಕ್ಷೇತ್ರದಲ್ಲಿ ಮುಖಂಡರ ಮನೆ ಮನೆ ಭೇಟಿ ಸಾಕಷ್ಟು ಮಹತ್ವ ಪಡೆದಿದೆ.
ಮೂಲಗಳ ಪ್ರಕಾರ ಆನಂದ್ ಪ್ರತಿ ಮುಖಂಡರ ಮನೆಗೆ ಭೇಟಿ ನೀಡುವ ಮೂಲಕ ತನ್ನ ರಾಜಕೀಯ ನಿರ್ಣಯ ಹಾಗೂ ಕ್ಷೇತ್ರದಲ್ಲಿನ ಪ್ರಸ್ತುತ ರಾಜಕೀಯದ ಕುರಿತು ಚರ್ಚೆ ನಡೆಸುತ್ತಿದ್ದು ಪಕ್ಷೇತರವಾಗಿ ಅಥವಾ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದರೆ ಕ್ಷೇತ್ರದಲ್ಲಿ ಬೆಂಬಲ ಸಿಗುತ್ತದೆಯೇ ಅನ್ನುವುದನ್ನ ಮುಖಂಡರ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಆನಂದ್ ಕಾಂಗ್ರೆಸ್ ಸೇರುವ ಸಂಬಂಧ ಚರ್ಚೆಯನ್ನು ಸಹ ಬೆಂಗಳೂರಿನಲ್ಲಿ ನಡೆಸಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರಿ ಮಾಜಿ ಶಾಸಕ ಸತೀಶ್ ಸೈಲ್‌ಗೆ ಬೆಂಬಲ ನೀಡಿದರೆ ಹೇಗೆ ಎನ್ನುವ ವಿಚಾರದ ಬಗ್ಗೆ ಚರ್ಚೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಬಹುತೇಕರು ಚುನಾವಣಾ ಕಣಕ್ಕೆ ಇಳಿಯುವಂತೆ ಆನಂದ್ ಬಳಿ ತಿಳಿಸಿದ್ದು ಆನಂದ್ ಮಾತ್ರ ಒಂದೆರಡು ದಿನ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಗರಸಭಾ ಸದಸ್ಯರ ಸಭೆ:
ಮಂಗಳವಾರ ತಾಲೂಕಿನ ಚಿತ್ತಾಕುಲದಲ್ಲಿರುವ ನಗರಸಭಾ ಸದಸ್ಯ ರಾಜೇಶ್ ಮಾಜಾಳಿಕರ್ ಮನೆಗೆ ತನ್ನ ಬೆಂಬಲಿತ ಆರು ಜನ ನಗರಸಭಾ ಸದಸ್ಯರ ಜೊತೆ ಆನಂದ್ ಚರ್ಚೆ ನಡೆಸಿದ್ದಾರೆ. ಸದ್ಯದ ರಾಜಕೀಯದ ಕುರಿತು ಚರ್ಚೆ ನಡೆಸಿದ್ದು ಈ ವೇಳೆ ಎಲ್ಲಾ ಸದಸ್ಯರು ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಇಷ್ಟು ದಿನ ಅತಂತ್ರವಾಗಿದ್ದ ಹಿನ್ನಲೆಯಲ್ಲಿ ತಾವು ಅತಂತ್ರರಾಗಿದ್ದು ಮುಂದಿನ ದಿನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಷೇತರವಾಗಿ ಗೆದ್ದು ಆನಂದ್ ಜೊತೆ ಗುರುತಿಸಿಕೊಂಡಿದ್ದ ಮನೋಜ್ ಬಾಂದೇಕರ್ ಸಭೆಗೆ ಆಗಮಿಸಿರಲಿಲ್ಲ. ಮನೋಜ್ ಬಾಂದೇಕರ್ ಬಹುತೇಕ ಬಿಜೆಪಿ ಸೇರುತ್ತಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಸಭೆಗೆ ಆಗಮಿಸಿಲ್ಲ ಎನ್ನಲಾಗಿದೆ.
ಎಲ್ಲಾ ಸಮುದಾಯವನ್ನ ಟಾರ್ಗೆಟ್ ಮಾಡಿದ ಆನಂದ್:
ಚುನಾವಣೆಗೆ ನಿಲ್ಲುವ ಗೊಂದಲದಲ್ಲಿದ್ದರು ಎಲ್ಲಾ ಸಮುದಾಯದ ಮುಖಂಡರ ಮನೆಗೆ ಭೇಟಿ ನೀಡುವ ಮೂಲಕ ತನ್ನ ನಡೆಯನ್ನ ಇನ್ನೂ ನಿಗೂಡವಾಗಿಯೇ ಆನಂದ್ ಅಸ್ನೋಟಿಕರ್ ಇಟ್ಟಿದ್ದಾರೆ. ಮಂಗಳವಾರ ಕೋಮಾರಪಂಥ ಸಮುದಾಯದ ಮಾರುತಿ ನಾಯ್ಕ, ಭಂಡಾರಿ ಸಮುದಾಯದ ರಂಜು ಮಾಳ್ಸೇಕರ್, ಛಾಯಾ ಜಾವಕರ್, ಪಡ್ತಿ ಸಮುದದಾಯದ ಚಂದ್ರಹಾಸ್ ಕೊಠಾರಕರ್, ಮೀನುಗಾರ ಸಮುದಾಯದ ರಾಜೇಶ್ ಮಾಜಾಳಿಕರ್ ಮನೆಗೆ ಭೇಟಿ ನೀಡಿದ್ದಾರೆ. ಬುಧವಾರ ಅಂಕೋಲಾದಲ್ಲಿ ನಾಮಧಾರಿ, ನಾಡವ, ಹಾಲಕ್ಕಿ ಸೇರಿದಂತೆ ಹಲವು ಸಮುದಾಯದ ಮುಖಂಡರ ಮನೆಗೆ ಆನಂದ್ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.