ಅಂಕೋಲಾ: ಕಳೆದ ಹಲವಾರು ವರ್ಷಗಳಿಂದ ಅಂಕೋಲೆಯ ಸಾಂಸ್ಕೃತಿಕ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ರಂಗದ ಭೂಮಿಕೆಯಲ್ಲಿ ತನ್ನ ಬಹುಮುಖ ವ್ಯಕ್ತಿತ್ವದಿಂದ ಸಾರ್ವಜನಿಕ ವಲಯದಲ್ಲಿ ಹೆಸರುಗಳಿಸಿದ ಕೃಷ್ಣಾ ನಾಯ್ಕ ಬೊಬ್ರವಾಡ ಅವರ ಸಾಹಿತ್ಯದ ಕೃತಿ ಸಮಾಜಮುಖಿಯಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಹೇಳಿದರು.
ಅವರು ಪಳ್ಳಿಕೇರಿಯ ಶಕ್ತಿದೇವತೆ ಶ್ರೀನಾಗಚೌಡೇಶ್ವರಿ ದೇವಸ್ಥಾನದ 22ನೇ ವರ್ಧಂತಿ ಮಹೋತ್ಸವದಲ್ಲಿ ಕೃಷ್ಣಾ ನಾಯ್ಕ ಬೊಬ್ರವಾಡ ಅವರ 12ನೇ ನಾಟಕ ಕೃತಿ ಸ್ನೇಹ ಸಿಂಚನ ಬಿಡುಗಡೆಗೊಳಿಸಿ ಮಾತನಾಡಿದರು.
ಇಂಜಿನಿಯರ್ ಪ್ರಭಾಕರ ನಾಯ್ಕ ಮಾತನಾಡಿ, ನೂತನವಾಗಿ ಶ್ರೀನಾಗಚೌಡೇಶ್ವರಿ ದೇವಸ್ಥಾನವನ್ನು ಅಭಿವೃದ್ಧಿ ಸಮಿತಿಯವರು ಹಾಗೂ ಊರ ನಾಗರಿಕರು ನಿರ್ಮಿಸಲು ಮುಂದಾಗಿರುವದು ಸಂತಸದ ಸಂಗತಿಯಾಗಿದೆ. ಈ ಮಹಾತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ನಾಟಕ ಲೇಖಕ ಕೃಷ್ಣಾ ಜಿ.ನಾಯ್ಕ ಮಾತನಾಡಿ, ನನ್ನ ನಾಟಕದ ಕೃತಿ ಈ ಶಕ್ತಿ ಕ್ಷೇತ್ರ ನಾಗಚೌಡೇಶ್ವರಿಯ ಸನ್ನಿಧಾನದಲ್ಲಿ ಲೋಕಾರ್ಪಣೆಗೊಳ್ಳುತ್ತಿರುದು ಸಂತೋಷ ತಂದಿದೆ. ನಿಮ್ಮೆಲ್ಲರ ಪ್ರೀತಿಯ ಒರತೆಯಲ್ಲಿ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂದರು.
ಶ್ರೀನಾಗಚೌಡೇಶ್ವರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಜಾನನ ಬಿ.ನಾಯ್ಕ ಪಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸುಭಾಷ್ ಕಾರೇಬೈಲ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀನಾಗಚೌಡೇಶ್ವರಿ ನಾಟ್ಯ ಮಂಡಳಿಯ ಕಲಾವಿದರಿಂದ ಸ್ನೇಹ ಸಿಂಚನ ನಾಟಕ ಪ್ರದರ್ಶನ ನಡೆಯಿತು.