ಅಂಕೋಲಾ: ನ್ಯಾಯಾಲಯ ಮತ್ತು ವಕೀಲರು ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವ ವಕೀಲರು ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಪಡೆಯುವಂತೆ ಪ್ರೋತ್ಸಾಹ ನೀಡುವ ಅಗತ್ಯತೆಯಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ, ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಚ್.ಡಿ.ನರೇಂದ್ರಬಾಬು ಹೇಳಿದರು.
ಅವರು ತಾಲೂಕಿನ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ವಕೀಲರ ಸಂಘದ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ವರ್ಚುವಲ್ ಮೂಲಕ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ಹೈಬ್ರಿಡ್ ವಿಚಾರಣಾ ವಿಧಾನ ಮುಂದುವರೆದಿದ್ದು, ಇದರಿಂದಾಗಿ ಯಾವುದೇ ಗ್ರಾಮೀಣ ಭಾಗಗಳ ವಕೀಲರು ಅವರಿರುವ ಸ್ಥಳದಿಂದಲೇ ಹೈಕೋರ್ಟ್ನಲ್ಲಿ ವಾದ ಮಾಡಬಹುದಾಗಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಸದೃಢ ಕಟ್ಟಡ ನಿರ್ಮಾಣಗೊಂಡು, ಅಲ್ಲಿ ಕಿರಿಯ ವಕೀಲರಿಗೆ ಮಾರ್ಗದರ್ಶನ ಆಗುವ ರೀತಿಯಲ್ಲಿ ಪರಿಣಿತ ವಕೀಲರಿಂದ ಕಾರ್ಯಾಗಾರಗಳು ನಡೆಯಲಿ ಎಂದು ಅವರು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಮಾತನಾಡಿ, ಇಂದು ದೇಶದ ಯಾವುದೇ ಮೂಲೆಗಳಿಂದ ನ್ಯಾಯಾಲಯಗಳಲ್ಲಿ ವಕೀಲರು ತಮ್ಮ ಕಕ್ಷಿದಾರರ ಪರ ವಕಾಲತ್ತು ಮಾಡುವ ವ್ಯವಸ್ಥೆ ಇದೆ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಕಟ್ಟಡ ಅತ್ಯಗತ್ಯ ಎಂದರು.
ತಾಲೂಕು ಜೆಎಂಎಫ್‌ಸಿ ನ್ಯಾಯಾಧೀಶ ಮನೋಹರ ಎಂ. ಮಾತನಾಡಿ ಶುಭ ಹಾರೈಸಿದುರ. ಜೆ.ಎಂ.ಎಫ್.ಸಿ ನ್ಯಾಯಾಧೀಶ ಪ್ರಶಾಂತ ಬಾದವಡಗಿ, ಹೆಚ್ಚುವರಿ ನ್ಯಾಯಾಧೀಶರಾದ ಅರ್ಪಿತಾ ಬೆಲ್ಲದ್ ಉಪಸ್ಥಿತರಿದ್ದರು. ವಕೀಲ ನಾಗಾನಂದ ಬಂಟ ಪ್ರಾರ್ಥಿಸಿದರು. ವಕೀಲ ವಿನಾಯಕ ನಾಯ್ಕ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಬೀರಣ್ಣ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಬಿ.ಡಿ.ನಾಯ್ಕ ವರದಿ ವಾಚಿಸಿದರು. ವಕೀಲ ಉಮೇಶ ನಾಯ್ಕ ಕಟ್ಟಡ ಮಂಜೂರಾತಿಗೆ ಸಹಕರಿಸಿದವರನ್ನು ನೆನೆದರು. ನಿರಂಜನ ಪ್ರಸಾದ ಕಾರ್ಯಕ್ರಮ ನಿರ್ವಹಿಸಿದರು. ಗುರು ನಾಯ್ಕ ವಂದಿಸಿದರು. ಹಿರಿಯ ವಕೀಲರುಗಳಾದ ಸುಭಾಷ್ ನಾರ್ವೇಕರ್, ವಾಸುದೇವ ನಾಯಕ, ಶಾಂತಾ ಹೆಗಡೆ, ಅನಂತ ತಲಗೇರಿ, ವಿನೋದ ಶಾನಭಾಗ್, ಗಜಾನನ ನಾಯ್ಕ, ತೇಜು ಬಂಟ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಗ್ರಾಮೀಣ ಭಾಗದ ವಕೀಲರು ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೇರಬೇಕಿದೆ: ನ್ಯಾ.ನರೇಂದ್ರಬಾಬು
