ಸಿದ್ದಾಪುರ: ನಾವು ಎಷ್ಟೇ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿ ಹಾಗೂ ಶಾಂತಿ ಅಗತ್ಯ. ಧರ್ಮಕಾರ್ಯಗಳು, ಆಧ್ಯಾತ್ಮಿಕ ಸಾಧನೆಯಿಂದ ಮನಸ್ಸಿಗೆ ಶಾಂತಿ ಸಿಗಲು ಸಾಧ್ಯ. ಆಧ್ಯಾತ್ಮ ಕೇವಲ ಋಷಿ ಮುನಿಗಳಿಗೆ ಮಾತ್ರ ಸೀಮಿತವಲ್ಲ. ಸಾಮಾನ್ಯ ಮನುಷ್ಯನು ಸಹ ಆಧ್ಯಾತ್ಮಿಕ ಮಾರ್ಗದ ಮೂಲಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ನಮ್ಮ ಸತ್ಕಾರ್ಯಗಳು ಜನ್ಮ ಮರುಜನ್ಮದಲ್ಲೂ ಒಳ್ಳೆಯದನ್ನು ನೀಡುತ್ತದೆ. ಬದುಕಿನಲ್ಲಿ ನಾವು ಸದಾ ಒಳ್ಳೆಯದನ್ನೇ ನಿರೀಕ್ಷಿಸಬೇಕು. ಒಳ್ಳೆಯದನ್ನೇ ಮಾಡಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಬಾಳಗೋಡ ಶ್ರೀ ಮಹಾಗಣಪತಿ ದೇವಾಲಯದಲ್ಲಿ ನಡೆದ 108 ನಾರಿಕೇಳ, ಶ್ರೀ ಗಣಹವನ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಆಗಮಶಾಸ್ತ್ರ, ವೇದ ವಿದ್ವಾಂಸ ಶಂಕರನಾರಾಯಣ ಭಟ್ಟ ಕಟ್ಟೆರವರು 108 ನಾರಿಕೇಳ ಶ್ರೀ ಗಣಹವನದ ಮಹತ್ವ ವಿವರಿಸಿ ಹೇಳಿದರು. ವಿದ್ವಾಂಸ ವೇ.ಮೂ. ರಾಮಚಂದ್ರ ಭಟ್ಟ ಕಲ್ಲಾಳ ಹವನದ ತಾಂತ್ರಿಕ ಭಾಗವನ್ನು ನಿರ್ವಹಿಸಿ ಮಾತನಾಡಿ ಆಶೀರ್ವಚನ ನೀಡಿದರು.ಜಿ.ಜಿ. ಹೆಗಡೆ ಬಾಳಗೋಡ ಧನ್ಯವಾದ ಸಮರ್ಪಿಸಿದರು.