ಭಟ್ಕಳ: ತಾಲೂಕಿನ ಹೆಬಳೆ ಗ್ರಿಡ್‌ನಲ್ಲಿ ವೈಫಲ್ಯಗೊಂಡಿದ್ದ ಪರಿವರ್ತಕ (ಟಿಸಿ) ಬದಲಿಸಲು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯರಾತ್ರಿ 1.45ರವರೆಗೂ ಕಾರ್ಯನಿರ್ವಹಿಸಿ, ಕೊನೆಗೂ ನಾಲ್ಕೈದು ದಿನಗಳಿಂದ ಉಂಟಾಗುತ್ತಿದ್ದ ವಿದ್ಯುತ್ ಕಣ್ಣಾಮುಚ್ಚಾಲೆಯಾಟಕ್ಕೆ ಕೊನೆ ಹಾಡಿದ್ದಾರೆ.
ಹೆಬಳೆ ಗ್ರಿಡ್‌ನಲ್ಲಿ ಮೂರು ತಲಾ 5 ಎಂವಿಎ ಪರಿವರ್ತಕದಲ್ಲಿ ಒಂದು ವೈಫಲ್ಯಗೊಂಡು ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಿತ್ತು. ಈ ಬಗ್ಗೆ ಹೆಸ್ಕಾಂ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಶನ್ ಅವರ ಗಮನಕ್ಕೆ ಬಂದಾಗ ತಕ್ಷಣ ಹೊಸಪೇಟೆಯಿಂದ ಹೊಸ ಪರಿವರ್ತಕ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಹುಬ್ಬಳ್ಳಿಯಿಂದ ಸಿಬ್ಬಂದಿಯನ್ನೂ ಕಳುಹಿಸಿಕೊಟ್ಟಿದ್ದರು.
ಹೊಸಪೇಟೆಯಿಂದ ಹೊಸ ಪರಿವರ್ತಕವು ಬುಧವಾರ ಸಂಜೆ ಹೆಬಳೆಗೆ ಬಂದು ತಲುಪಿದ್ದು, ಹುಬ್ಬಳ್ಳಿ, 33ಕೆವಿ ಕಾರವಾರ ಹಾಗೂ ಭಟ್ಕಳದ ಸ್ಥಳೀಯ ಸಿಬ್ಬಂದಿ ಸೇರಿ ಮಧ್ಯರಾತ್ರಿಯವರೆಗೂ ದಣಿವರಿಯದೆ ಕಾರ್ಯನಿರ್ವಹಿಸಿ, ಹಳೆಯ ಪರಿವರ್ತಕವನ್ನು ಬದಲಿಸಿ ಹೊಸ ಪರಿವರ್ತಕವನ್ನು ಅಳವಡಿಸಿ ಪರೀಕ್ಷೆ ಕೈಗೊಂಡು ಬೆಳಗ್ಗಿನ ವೇಳೆಗೆ ತಾಲೂಕಿನ ವಿದ್ಯುತ್ ಪುನಃಸ್ಥಾಪಿಸಿದ್ದಾರೆ.