ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಪಂ ವ್ಯಾಪ್ತಿಯ ನೀಲ್ಕೋಡದ ನಿವಾಸಿ ತಿಮ್ಮಪ್ಪ ಗೌಡ ಎನ್ನುವವರು ಖರೀದಿಸಿದ ಗ್ಯಾಸ್ ಸಿಲಿಂಡರ್‌ನಲ್ಲಿ ಅನಿಲ ಬದಲು ಕಲ್ಮಶ ನೀರಿನ ರೀತಿಯ ದ್ರವ ಪತ್ತೆಯಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ದೇವಿಕೃಪಾ ಗ್ಯಾಸ್ ಏಜೆನ್ಸಿಯಿಂದ ಪೂರೈಕೆಯಾಗುವ ಇಂಡೇನ್ ಕಂಪನಿಯ ಸಿಲಿಂಡರ್ ಖರೀದಿಸಿದ್ದರು. ಈ ಮೊದಲು ಖರೀದಿಸಿದ್ದ ಸಿಲಿಂಡರ್ ಪೂರ್ತಿ ಅನಿಲ ಬಳಕೆಯಾಗಿದ್ದರಿಂದ ಸಿಲಿಂಡರ್ ಬದಲಾಯಿಸಿದ್ದರು. ರೆಗ್ಯುಲೇಟರ್ ಮೂಲಕ ಸ್ಟೋವ್‌ಗೆ ಬೆಂಕಿ ಉರಿಸಿದಾಗ ಉರಿಯಲಿಲ್ಲ. ಇದರಿಂದ ಅನುಮಾನಗೊಂಡ ತಿಮ್ಮಪ್ಪ ಅವರು ಸಿಲಿಂಡರ್ ರೆಗ್ಯುಲೇಟರ್ ಪಾಯಿಂಟ್ ವಾಲ್ವ್ ತುದಿಯಲ್ಲಿ ಪ್ರೆಸ್ ಮಾಡಿದ್ದಾರೆ. ಆವಗಲೂ ಗ್ಯಾಸ್ ಲಿಕೇಜ್ ಆಗಿಲ್ಲ. ಇದರಿಂದ ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ.
ಕೊನೆಗೆ ಸಿಲಿಂಡರ್‌ನ್ನು ಕೆಳಮುಖವಾಗಿಟ್ಟು ಪುನಃ ರೆಗ್ಯುಲೇಟರ್ ಪಾಯಿಂಟ್ ವಾಲ್ವ್ ತುದಿಯಲ್ಲಿ ಪ್ರೆಸ್ ಮಾಡಿದ್ದಾರೆ. ಈ ವೇಳೆ ಕಲ್ಮಶ ರೀತಿಯ ದ್ರವ ಪತ್ತೆಯಾಗಿದ್ದನ್ನು ಕಂಡು ಅವಕ್ಕಾಗಿದ್ದಾರೆ. ತಕ್ಷಣ ಗ್ಯಾಸ್ ಏಜೆನ್ಸಿಯವರಿಗೆ ಸಂಪರ್ಕಿಸಿದಾಗ ಪ್ರಾರಂಭದಲ್ಲಿ ಇದು ನಮ್ಮ ತಪ್ಪಲ್ಲ, ಏನು ಮಾಡಲಾಗುವುದಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದರಾದರು, ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ತಿಳಿಸಿದಾಗ ಸಿಲಿಂಡರ್ ಬದಲಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿರುವುದಾಗಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದಾರೆ.