ಯಲ್ಲಾಪುರ: ನಮ್ಮ ತಾಲೂಕು ಮಾರ್ಕೇಟಿಂಗ್ ಸೊಸೈಟಿಯ 23 ಗುಂಟೆ ಜಮೀನು ಪಡೆಯಲು ಸಂಘ ಕಾನೂನಾತ್ಮಕ ಹೋರಾಟ ನಡೆಸುತ್ತದೆ ಎಂದು ಸೊಸೈಟಿಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ತಾಲೂಕು ಮಾರ್ಕೆಟಿಂಗ್ ಸೊಸೈಟಿಗೆ (ಟಿ.ಎಂ.ಎಸ್.) ಮಂಜೂರಿಯಾದ 23 ಗುಂಟೆ ನಿವೇಶನವನ್ನು ಉಳಿಸಿಕೊಳ್ಳಲು ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಕ್ಕೆ ಮಂಜೂರಿಯಾದ ಸ್ಥಳವನ್ನು ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರವಾಗಿದೆ. ಈ ಹೋರಾಟಕ್ಕೆ ಸದಸ್ಯರೆಲ್ಲರೂ ಬೆಂಬಲಿಸಬೇಕು. ನಾವು ಕಾನೂನು ಹೋರಾಟ ನಡೆಸುತ್ತೇವೆ. ಈ ಸ್ಥಳದಲ್ಲಿ ತೀರಾ ಅಗತ್ಯವಾದ ಆಸ್ಪತ್ರೆ ನಿರ್ಮಿಸುವ ಯೋಚನೆ ಹೊಂದಿದ್ದೇವೆ ಎಂದು ಹೇಳಿದರು.
ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ನಮ್ಮ ಸಂಘಕ್ಕೆ ಸ್ಥಳ ಮಂಜೂರಿ ಮಾಡಲು 20.06.2020 ಕ್ಕೆ ಕಂದಾಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು 14-7-2020 ಕ್ಕೆ ಜಿಲ್ಲಾಧಿಕಾರಿಗಳು ಮಂಜೂರಿ ನೀಡಿದರು. ಹಾಗೆಯೇ 13.07.2020 ರಂದು ತಹಶೀಲ್ದಾರರ ಮೂಲಕ ಸುಮಾರು 4 ಲಕ್ಷ ರೂ. ಹಣವನ್ನು ಸರ್ಕಾರಕ್ಕೆ ಭರಿಸಲಾಯಿತು. ಆದರೆ, 08.03.2021 ಕ್ಕೆ ಇದೇ ಸ್ಥಳವನ್ನು ಪ್ರಹ್ಲಾದ ಆಚಾರ್ಯ ಮತ್ತು ಕುಟುಂಬದವರಿಗೆ ಮಂಜೂರಿ ನೀಡಲಾಯಿತು. 1 ವರ್ಷದಿಂದ ತಹಶೀಲ್ದಾರರ ಕಚೇರಿಯಲ್ಲಿ ದಾಖಲಿಸದೇ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಬರಲಾಗಿದೆ. ಹಾಗಾಗಿ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವೆ. ಅಲ್ಲದೇ, ಖಾಸಗಿ ವ್ಯಕ್ತಿಗಳು ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸ್ಥಳವನ್ನು ಸಮತಟ್ಟು ಮಾಡಿ ಬಳಕೆ ಮಾಡಿರುವುದನ್ನು ಮನಗಂಡು, ಪರಿಸ್ಥಿತಿ ವಿಕೋಪಕ್ಕೆ ಹೋದಿತು ಎಂಬುದಕ್ಕೆ ಸಭೆ ಕರೆದಿದ್ದೇವೆ ಎಂದು ವಿವರಿಸಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಮಾತನಾಡಿ, ನಮ್ಮ ಸಂಸ್ಥೆ ಈವರೆಗೂ ರಾಜಕಾರಣದಿಂದ ಹೊರತಾಗಿತ್ತು, ಇಂದಿನ ಬೆಳವಣಿಗೆ ಗಮನಿಸಿದರೆ ರಾಜಕೀಕರಣ ಆಗುತ್ತದೆಯೋ ಎಂಬ ಆತಂಕ ಉಂಟಾಗಿದೆ. ಆದರೂ ದಾಖಲೆಗಳ ವಾಸ್ತವಿಕ ಸ್ಥಿತಿ ಗಮನಿಸಿದರೆ ನಮ್ಮ ಸಂಸ್ಥೆಯ ಬೆಳವಣಿಗೆಗೆ ಈ ಸ್ಥಳ ದೊರೆಯುವಲ್ಲಿ ನಾವೆಲ್ಲರೂ ಸಂಘದ ಜೊತೆ ನಿಲ್ಲುತ್ತೇವೆ. ಹಾಗಂತ ಸಚಿವರ ಮೇಲೆ ಆಪಾದನೆ ಸರಿಯಲ್ಲ. ಅವರ ಬಳಿ ಹೋಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.
ಸಂಸ್ಥೆಯ ನಿರ್ದೇಶಕ ವೆಂಕಟ್ರಮಣ ಬೆಳ್ಳಿ ಮಾತನಾಡಿ, ಕಾನೂನಾತ್ಮಕ ಹೋರಾಟವನ್ನು ನಾವು ನಡೆಸುತ್ತೇವೆ. ಈ ಕುರಿತು ಸಚಿವರ ಗಮನಕ್ಕೂ ತಂದಿದ್ದೇವೆ ಎಂದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಮೆಣಸುಪಾಲ್, ಸಹ್ಯಾದ್ರಿ ಸಂಘದ ಡಿ.ಎನ್.ಗಾಂವ್ಕಾರ, ಮಲೆನಾಡು ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ನಾರಾಯಣ ಭಟ್ಟ ಜಡ್ಡಿಪಾಲ, ಪ್ರಶಾಂತ ಸಭಾಹಿತ, ರಾಮಚಂದ್ರ ಭಟ್ಟ ಚಿಕ್ಯಾನಮನೆ, ಡಾ.ರವಿ ಭಟ್ಟ ಬರಗದ್ದೆ, ರಾಘವೇಂದ್ರ ಭಟ್ಟ ಹಾಸಣಗಿ, ಗಜಾನನ ಭಟ್ಟ ಜಡ್ಡಿ , ರಾಮಚಂದ್ರ ಭಟ್ಟ ಭರಣಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಕಾರ್ಯನಿರ್ವಾಹಕ ಸಿ.ಎಸ್.ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು, ನಿರ್ದೇಶಕ ವೆಂಕಟರಮಣ ಕಿರಕುಂಬತ್ತಿ ವಂದಿಸಿದರು.