ಶಿರಸಿ: ಕಳೆದ 30 ವರ್ಷಗಳಿಂದ ರಸ್ತೆ ಸಮಸ್ಯೆಗೆ ಮುಕ್ತಿ ಪಡೆಯಲು ಕಾಯುತ್ತಿರುವ ಕಕ್ಕಳ್ಳಿ, ಮುಶ್ಕಿ, ಶಿರಗುಣಿ ಭಾಗದ ಜನರಿಗೆ ಈ ಬಾರಿಯೂ ನಿರಾಸೆಯಾಗಿದ್ದು, ಚುನಾವಣೆ ಸಮೀಪಿಸಿದರೂ ರಸ್ತೆ ಆಗದ ಪರಿಣಾಮ ಬೇಸರ ವ್ಯಕ್ತಪಡಿಸಿದ್ದಾರೆ.
ಶಿರಸಿಯಿಂದ ಅಂದಾಜು 30 ಕಿಮೀ ದೂರದಲ್ಲಿರುವ ವಾನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಕ್ಕಳ್ಳಿಯಿಂದ ಶಿರಿಗಿಣಿ ಹೋಗುವ ರಸ್ತೆಯ ಸರ್ವ ಋತು ರಸ್ತೆ ಅಭಿವೃದ್ಧಿ ಮರಿಚೀಕೆಯಾಗಿದ್ದು, ಕಚ್ಚಾ ರಸ್ತೆಯಲ್ಲೇ ಇಂದೂ ಬದುಕು ಸಾಗಿಸುವ ಸ್ಥಿತಿಯಿದೆ. ಕಳೆದ 30 ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ. ಕಕ್ಕಳ್ಳಿಯಿಂದ ಶಿರಗುಣಿಗೆ ಸುಮಾರು 10 ಕಿಮೀ ದೂರವಿದ್ದು, ಇದಷ್ಟೂ ದೂರ ಕಚ್ಚಾ ರಸ್ತೆಯಲ್ಲೇ ಸಾಗಬೇಕಿದೆ. ಅಲ್ಲದೇ ಈ ಭಾಗದಲ್ಲಿ ಅಂದಾಜು 300 ಕ್ಕೂ ಅಧಿಕ ಮನೆಗಳಿದ್ದು, ಅವುಗಳ ಮತ ಕೇಳಲು ಬರುವವರು ರಸ್ತೆ ಅಭಿವೃದ್ಧಿಗೆ ಸಹಕಾರ ಮಾಡುವುದಿಲ್ಲ ಎಂಬ ಆಕ್ರೋಶ ಗ್ರಾಮಸ್ಥರರಿಂದ ವ್ಯಕ್ತವಾಗಿದೆ.
ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದೂ ಕಷ್ಟ ಎನ್ನುವ ಸ್ಥಿತಿ ಇರುತ್ತದೆ ಇನ್ನು ವಾಹನಗಳ ಸಂಚಾರ ಬಲು ಕಷ್ಟ. ಇಂದಿನ ದಿನದಲ್ಲೂ ಕುಗ್ರಾಮದಲ್ಲಿ ಇದ್ದೇವೆ ಎನ್ನುವ ಬೇಸರ ನಮ್ಮದಾಗಿದೆ ಎನ್ನುತ್ತಾರೆ ಸ್ಥಳೀಯ ಸಂದೇಶ ಭಟ್. ಅಲ್ಲದೇ ಧೋರಣಗಿರಿಯವರೆಗೆ ರಸ್ತೆ ಆಗಿದ್ದು, ಮುಂದೆ ಶಿರಿಗಿಣಿವರೆಗೆ ರಸ್ತೆ ಆಗಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ಅವರು ವಿನಂತಿಸಿದ್ದಾರೆ. ಇನ್ನು ಈ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆಗೂ ಬಂದ್ ಅಗಿದೆ. ಬಸ್ಸು ಹತ್ತಬೇಕು ಎಂದಾದಲ್ಲಿ 10 ಕಿಮೀ ನಡೆದು ಬಂದು ಕಕ್ಕಳ್ಳಿಯಿಂದ ಬರಬೇಕಿದೆ. ಕಾರಣ ಮೂಲಭೂತ ಸೌಕರ್ಯ ಒದಗಿಸಬೇಕು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಮನವಿ
ಶಿರಗುಣಿ ಭಾಗದಲ್ಲಿ ಹವ್ಯಕ, ಸಿದ್ಧಿ, ಕರೆ ಒಕ್ಕಲಿಗರು ಕೂಡಿದ್ದಾರೆ. ಈ ಭಾಗದಲ್ಲಿ ಸತತವಾಗಿ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದು, ಆದರೂ ಶಾಸಕರಿಂದ ಕೇವಲ ಭರವಸೆ ಮಾತ್ರ ವ್ಯಕ್ತವಾಗುತ್ತಿದೆ. ಇದರಿಂದ ಮೂಲಭೂತ ಸೌಕರ್ಯ ಇಲ್ಲದೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದು,ಗ್ರಾಮದ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ ಎಂಬುದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ