ಕಾರವಾರ: ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಸಿಐಟಿಯು ಸಂಯೋಜಿತ ಸಂಘಟನೆಗಳು ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದೆ.
ಜಿಲ್ಲೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರಿಂದ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಕೆಲವೆಡೆ ಡಿಪಿಆರ್ ಪ್ರಕಾರ ನಗರಸಭೆಗೆ ಹುದ್ದೆ ಹೊಂದಾಣಿಕೆ ಮಾಡುವಾಗ ಕೆಲವರಿಗೆ ನೇಮಿಸಿಕೊಂಡ ಹುದ್ದೆಗೂ ಕೆಲಸ ಮಾಡಿಸುತ್ತಿರುವ ಹುದ್ದೆಗೂ ವ್ಯತ್ಯಾಸವಿರುವುದು ಕಂಡುಬಂದಿದೆ. ಈ ವ್ಯತ್ಯಾಸ ಗೊತ್ತಾಗಿರುವುದು ನೇರನೇಮಕಾತಿ ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಹುದ್ದೆಯ ವಿವರಗಳನ್ನು ಅಧಿಕೃತವಾಗಿ ಪಡೆದುಕೊಳ್ಳುವ ಸಂದರ್ಭದಲ್ಲಿ ಮಾತ್ರ. ಹೀಗಾಗಿ ಕೆಲವು ಅಧಿಕಾರಿಗಳ ತಪ್ಪಿನಿಂದಾಗಿ ಪೌರ ಮತ್ತು ನೈರ್ಮಲ್ಯ ಕೆಲಸದಲ್ಲಿ ನೈಜವಾಗಿ ಹಗಲಿರುಳು ತೊಡಗಿರುವ ಕಾರ್ಮಿಕರಿಗೆ ಅನ್ಯಾಯವಾಗಿದೆ. ಅದೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಾರ್ಮಿಕರಿಗೆ. ಇಂಥ ಲೋಪದೋಷದಿಂದ ತಪ್ಪಿಹೋದ ಪೌರ ಕಾರ್ಮಿಕರಿಗೆ ದಯವಿಟ್ಟು ತಾವು ನ್ಯಾಯ ನೀಡಲು ಸಾಧ್ಯವಾಗಬೇಕೆಂದು ಆಗ್ರಹಿಸಲಾಗಿದೆ.
ಕೆಲವೆಡೆ ಹಾಜರಾತಿ ದಾಖಲೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದೆ ಅಥವಾ ಸರಿಯಾದ ಹಾಜರಾತಿ ದಾಖಲೆಗಳನ್ನು ಪೂರೈಸಿಲ್ಲ ಎಂಬ ದೂರಿದೆ. ಕೆಲವು ಕಾರ್ಮಿಕರು ಹತ್ತು ಹದಿನೈದು ವರ್ಷ ಕೆಲಸ ಮಾಡಿಯೂ ನೇರನೇಮಕಾತಿಯಲ್ಲಿ ಖಾಯಮಾತಿ ಪಟ್ಟಿಯಲ್ಲಿ ಹೆಸರು ಬಂದಿರುವುದಿಲ್ಲ. ಈಗಾಗಲೇ ಎಲ್ಲಾ ಕಾರ್ಮಿಕರೂ ಗುತ್ತಿಗೆ ಕಾರ್ಮಿಕರಾಗಿಯೇ ಈ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಆ ಸಂದರ್ಭದಲ್ಲಿ ಗುತ್ತಿಗೆದಾರರು ಮತ್ತು ಮುಖ್ಯ ಉದ್ಯೋಗದಾತರಿಂದಾದ ಹಾಜರಾತಿ, ಮತ್ತಿತರೆ ದಾಖಲಾತಿ ಸರಿಯಾಗಿ ನಿರ್ವಹಿಸದಿರುವ ಕಾರಣ ಕೆಲವು ಕಾರ್ಮಿಕರಿಗೆ ನೇಮಕಾತಿಯಲ್ಲಿ ಅನ್ಯಾಯವಾದಂತೆ ತೋರುತ್ತಿದೆ. ಕೆಲಸದ ವೇಳೆ ಮೃತರಾದವರ ಕುಟುಂಬದ ಅವಲಂಬಿತರಿಗೆ ಈ ನೇಮಕಾತಿಯಲ್ಲಿ ಅವಕಾಶ ಸಿಗಬೇಕೆಂದು ಕೂಡ ಆಗ್ರಹಿಸಲಾಗಿದೆ.
ಪೌರಕಾರ್ಮಿಕರ ಖಾಯಮಾತಿಗೋಸ್ಕರ ಬಂದಿರುವ ಅರ್ಜಿಗಳ ಪೈಕಿ ನೈಜ ಪೌರ ಕಾರ್ಮಿಕರಾಗಿ ಕೆಲಸ ಮಾಡದಿರುವವರ ಅರ್ಜಿಗಳೂ ಬಂದಿರುತ್ತವೆ ಎಂದು ಸಂಘಟನೆಯ ಗಮನಕ್ಕೆ ಬಂದಿದೆ. ಅಂಥವರು ಪೌರ ಕಾರ್ಮಿಕರೆಂದು ಖಾಯಂ ಆದರೆ ಅದೇ ಹುದ್ದೆಯಲ್ಲಿ ತೊಡಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ಅಂಥವರಿಂದ ಮುಚ್ಚಳಿಕೆ ಪಡೆಯಬೇಕು. ಏಕೆಂದರೆ ಜಿಲ್ಲೆಯಲ್ಲಿ ಈಗಾಗಲೇ ನಾವು ನೋಡಿದಂತೆ, ಕೆಲವೆಡೆ, ಕೆಲಸಕ್ಕೆ ನೇಮಿಸಿಕೊಂಡ ಹುದ್ದೆಗೂ ಮಾಡುತ್ತಿರುವ ಕೆಲಸಕ್ಕೂ ಸಂಬAಧವೇ ಇಲ್ಲ. ಕಾರಣ ಎಸ್.ಸಿ/ಎಸ್.ಟಿ ಅಲ್ಲದ ಇತರ ವರ್ಗಗಳಿಂದ ಬಂದವರಾಗಿರುವ ಕಾರಣಕ್ಕಾಗಿ ಪೌರ ಮತ್ತು ನೈರ್ಮಲ್ಯ ಕೆಲಸಗಳಿಂದ ಬೇರೆ ಕೆಲಸಕ್ಕೆ ನಿಯೋಜಿಸಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಆಯಾ ನಗರ ಸ್ಥಳೀಯಾಡಳಿತ ಸಂಸ್ಥೆಗೆ ಈಗಾಗಲೇ ನೇಮಕಾತಿಗೆ ಮಂಜೂರು ನೀಡಿದ ಸಂಖ್ಯೆಗೆ ಅನುಗುಣವಾಗಿ ಯಾರೆಲ್ಲ ನೈರ್ಮಲ್ಯ ಮತ್ತು ಪೌರ ಕೆಲಸದಲ್ಲಿ ತೊಡಗಿದ್ದವರಿಂದ ಅರ್ಜಿ ಬಂದಿದೆಯೋ ಅವರಿಗೆಲ್ಲರಿಗೂ ಆ ಸಂಖ್ಯೆಗೆ ಅನುಗುಣವಾಗಿ ನೇಮಿಸಿಕೊಳ್ಳಬೇಕಿದೆ. ಆ ಕಾರಣಕ್ಕಾಗಿ ಹೆಚ್ಚುವರಿ ಮತ್ತು ತಿರಸ್ಕೃತ ಪಟ್ಟಿಯಲ್ಲಿರುವ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ನೇರ ನೇಮಕಾತಿಗೆ ಒಳಪಡದರ‍್ನು ಗುರುತಿಸಿ ನೇರ ವೇತನ ದರ್ಜೆಗೆ ಒಳಪಡಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಜಿಲ್ಲಾ ಮ್ಯಾನುವಲ್ ಸ್ಕಾವೆಂರ್ಸ್ ನಿವಾರಣೆ ಸಮಿತಿಯ ಸದಸ್ಯ ಡಿ.ಸ್ಯಾಮ್ಸನ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಸೇರಿದಂತೆ ಮುಂತಾದವರು ಮನವಿ ಸಲ್ಲಿಸುವ ವೇಳೆ ಇದ್ದರು.