ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಲೈಟ್ ಫಿಶಿಂಗ್ ನಿಷೇಧ ಮಾಡಲು ಕ್ರಮಕ್ಕೆ ಮುಂದಾದಾಗ ಮೀನುಗಾರರು ತಡೆಯೊಡ್ಡಿದ ಘಟನೆ ನಡೆಯಿತು.
ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು, ಕರಾವಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರು, ಹೊನ್ನಾವರ ಪೊಲೀಸ್ ಠಾಣೆಯ ಪಿಎಸ್‌ಐರವರು ಲೈಟ್ ಫಿಶಿಂಗ್‌ಗೆ ಅಳವಡಿಸಿದ ಜನರೇಟರ್ ಲೈಟ್ ತೆರವುಗೊಳಿಸಲು ಮುಂದಾದಾಗ ಸ್ಥಳೀಯ ಕಾರ್ಮಿಕರ ಸಂಘಟನೆ, ಬೋಟ್ ಮಾಲಕರ ಸಂಘಟನೆ ಮತ್ತು ಮೀನುಗಾರರ ನಡುವೆ ವಾಗ್ವಾದ ನಡೆಯಿತು.
ಸ್ಥಳೀಯ ಮೀನುಗಾರರು ಮೀನುಗಾರಿಕೆ ಜಂಟಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗು ಗೋವಾ ರಾಜ್ಯದ ಮೀನುಗಾರರು ಪಾಲಿಸುವ ಕ್ರಮವನ್ನು ನಮ್ಮ ಹೊನ್ನಾವರ ಮೀನುಗಾರರು ಪಾಲಿಸುತ್ತೇವೆ. ಈಗ ಸದ್ಯದ ಮಟ್ಟಿಗೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಟ್ಟು 4 ದಿನಗಳ ಕಾಲ ಲೈಟ್ ಫಿಶಿಂಗ ಬಂದ್ ಮಾಡುತ್ತೇವೆ. ಅಷ್ಟರಲ್ಲಿ ಉಳಿದೆಲ್ಲ ಕಡೆಯಲ್ಲಿಯೂ ಲೈಟ್ ಫಿಶಿಂಗ್ ಬಂದ್ ಮಾಡಿ, ಎಲ್ಲಾ ಕಡೆಯಲ್ಲಿಯೂ ಬಂದಾದಲ್ಲಿ ನಾವು ಕೂಡ ಬಂದ್ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರಾವಳಿ ಮೀನುಗಾರರ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್, ಕಾರ್ಯದರ್ಶಿ ರಾಜು ತಾಂಡೇಲ್, ಬೋಟ್ ಮಾಲೀಕರ ಅಧ್ಯಕ್ಷ ಅಮಜಾ ಪಟೇಲ್, ಅಬ್ಬಾಸ್ ಸಾಬ್ ಟ್ರಾಲ್ ಬೋಟ್ ಸಂಘದ ಅಚ್ಚಾ ಸಾಬ್, ಸ್ಥಳೀಯ ಮೀನುಗಾರ ಜಗದೀಶ್ ತಾಂಡೇಲ್ ಮೀನುಗಾರ ಕಾರ್ಮಿಕರು, ಮಾಲಕರು ಹಾಜರಿದ್ದರು.