ಕಾರವಾರ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳನ್ನ ಕರೆಸಿ ಸಮಾವೇಶ ಮಾಡುವ ಬಯಕೆಯನ್ನು ಹೊಂದಿದ್ದು ಮಾ.10ರಿಂದ 12ನೇ ತಾರೀಕಿನ ಒಳಗೆ ಸಿಎಂ ಬಸವರಾಜ ಬೊಮ್ಮಾಯಿ ಕುಮಟಾಕ್ಕೆ ಆಗಮಿಸುತ್ತಾರೆ. ಈ ವೇಳೆಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ರಿಂದಲೇ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾತನಾಡಿದ ಅವರು ಈ ಹಿಂದೆ ಸೂಪರ್ ಸ್ಪೆಷಾಲಿಟಿಗೆ ನೋಡಿದ ಜಾಗ ಅರಣ್ಯ ಪ್ರದೇಶದ ಸಮಸ್ಯೆ ಇದ್ದಿದ್ದರಿಂದ ಈಗ ಬೇರೆ ಕಡೆ ನೋಡಲಾಗಿದೆ. ತೋಟಗಾರಿಕೆ ಹಾಗೂ ಪರಿಶಿಷ್ಟ ಪಂಗಡದ ಇಲಾಖೆಗೆ ಮೀಸಲಿಟ್ಟ ಜಾಗವನ್ನು ಗುರುತಿಸಿದ್ದ ಕುಮಟಾ ಪಟ್ಟಣದಲ್ಲಿಯೇ ಈ ಜಾಗವಿದೆ. ಈ ಹಿಂದೆ ಆರೋಗ್ಯ ಸಚಿವರು ಬಂದು ನೋಡಿದ ಜಾಗ ಅರಣ್ಯ ಪ್ರದೇಶದಲ್ಲಿದ್ದು ಈಗ ನೋಡಿರುವ ಜಾಗ ಪಟ್ಟಣದಲ್ಲಿಯೇ ಇರುವುದರಿಂದ ಪಟ್ಟಣದಲ್ಲಿ ಇರುವ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇನ್ನು ಮರಳಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕೆಲ ತಾಂತ್ರಿಕ ತೊಂದರೆ ಇಂದ ಮರಳು ತೆಗೆಯಲು ಅನುಮತಿ ಕೊಡಲಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಲ್ಲಿ ಉತ್ತರ ಕನ್ನಡದಲ್ಲೂ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುವುದು ಎಂದಿದ್ದಾರೆ. ಬಿಜೆಪಿ ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ಹಣ ವಶಪಡಿಸಿಕೊಳ್ಳಲಾಗಿದೆ. ಕಾನೂನು ಎಲ್ಲರಿಗೂ ಒಂದೇ, ಲೋಕಾಯುಕ್ತ ಅಧಿಕಾರಿಯ ಮೇಲೆ ದಾಳಿ ನಡೆಸಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.