ದಾಂಡೇಲಿ: ಕಳೆದ 9 ದಿನಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ನಡೆದ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಪ್ರತಿಭಟನೆ ಅಂತ್ಯಗೊಳ್ಳುತ್ತಿದ್ದಂತೆಯೇ ಸ್ಥಗಿತಗೊಂಡಿದ್ದ ಉತ್ಪಾದನಾ ಚಟುವಟಿಕೆಗೆಗೆ ಚಾಲನೆ ದೊರೆತಿದೆ.
ಕಳೆದ 9 ದಿನಗಳಿಂದ ಕಾಗದ ಕಾರ್ಖಾನೆಯ ಗೇಟ್ ಮುಂಭಾಗದಲ್ಲಿ ಘೋಷಣೆಗಳ ಸದ್ದುಗದ್ದಲ, ಅಲ್ಲಲ್ಲಿ ಕಾರ್ಮಿಕರ ನಡುವೆ ಮುಂದೇನು ಎಂಬ ಗುಂಪು ಚರ್ಚೆ, ಅತ್ತಿಂದಿತ್ತ ಓಡಾಡುತ್ತಿದ್ದ ಪೊಲೀಸರ ತಂಡ, ನಿಯತ್ತಾಗಿ ಕಾರ್ಖಾನೆಯೊಳಗಡೆ ಕೆಲಸಕ್ಕೆ ಹೋಗಿ ಕಾರ್ಖಾನೆಯೊಳಗಡೆ ಬಹುತೇಕ ವಿಶ್ರಾಂತಿಯನ್ನೆ ಪಡೆದುಕೊಳ್ಳುತ್ತಿದ್ದ ಕಾಯಂ ಕಾರ್ಮಿಕರು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನಡೆಯುತ್ತಿದ್ದ ಜಂಟಿ ಸಂಧಾನ ಸಮಿತಿಯ ಅಧ್ಯಕ್ಷರ ಭಾಷಣ ಹೀಗೆ ಇದ್ದ ವಾತವರಣ ಶುಕ್ರವಾರ ಕಾಗದ ಕಾರ್ಖಾನೆಯ ಗೇಟ್ ಮುಂಭಾಗದಲ್ಲಿ ಇರಲಿಲ್ಲ. ಕಾರ್ಖಾನೆ ಸಹಜ ಸ್ಥಿತಿಗೆ ಬಂದಿದೆ.
ಕಾರ್ಖಾನೆಯೇನೋ ಸಹಜ ಸ್ಥಿತಿಗೆ ಬಂದಿದೆಯಾದರೂ, ತಮ್ಮ ಹಲವಾರು ನೋವುಗಳ ಶಮನಕ್ಕಾಗಿ ಪ್ರತಿಭಟನೆ ಕೈಗೊಂಡಿದ್ದ ಗುತ್ತಿಗೆ ಕಾರ್ಮಿಕರ ಮುಖದಲ್ಲಿ ಹೋರಾಟದ ಅಂತ್ಯದಲ್ಲಿಯೂ ನಲಿವು ಕಾಣದೇ ಇರುವುದು ಮಾತ್ರ ಹೋರಾಟದ ರಿಸಲ್ಟ್ ಏನು ಎನ್ನುವುದನ್ನು ಸಾರಿ ಹೇಳುವಂತಿತ್ತು.