ಕುಮಟಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.8ರಂದು ನಡೆಯಲಿದ್ದು, ಅಕ್ಷರ ಜಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಮತ್ತು ಲಾಂಛನ ಬಿಡುಗಡೆಗೊಳಿಸಿದ ಶಾಸಕರು, ಕನ್ನಡದ ಬಗ್ಗೆ ಮಾತನಾಡಿದರು.
ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಿ ಭಾಷೆ ಮಾತನಾಡುತ್ತಾರೆ. ಕೇರಳದಲ್ಲಿ ತುಳು, ಆಂಧ್ರಪ್ರದೇಶದಲ್ಲಿ ಮಲಯಾಳಿ ಭಾಷೆ ಮಾತನಾಡುತ್ತಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ವಿವಿಧ ಭಾಷೆಯನ್ನು ಮಾತನಾಡುತ್ತಾರೆ. ದಶಕಗಳ ಹಿಂದೆ ಬೆಂಗಳೂರಿಗೆ ಹೋದರೆ ವ್ಯಾಪಾರಿಗಳು ಇಂಗ್ಲೀಷ್ನಲ್ಲೆ ವ್ಯವಹಾರ ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ಬಂದಿದೆ ಎಂದರೆ ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಕನ್ನಡಪರ ಕಾರ್ಯಕ್ರಮಗಳಿಂದಲೇ ಸಾಧ್ಯವಾಗಿದೆ. ಅದರಲ್ಲೂ ನಮ್ಮ ಸರ್ಕಾರ ಬಂದ ಮೇಲೆ ಕನ್ನಡಕ್ಕೆ ಹೆಚ್ಚಿನ ಪ್ರಾದಾನ್ಯತೆ ನೀಡಿದ್ದೇವೆ. ಹಾಗಾಗಿ ಕುಮಟಾದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳವನ್ನು ವಿಜೃಂಭಣೆಯಿಂದ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಕಾರ್ಯಕ್ರಮದ ವಿವರವಾದ ಮಾಹಿತಿ ನೀಡಿದರು. ಮಾ.8ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳದ ಉದ್ಘಾಟನೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ನೆರವೇರಿಸಲಿದ್ದಾರೆ. ಸಿ.ಡಿ.ಪಡುವಣಿಯವರ ಬಿಂಬ ಕವನ ಸಂಕಲವನ್ನು ಶಾಸಕ ದಿನಕರ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಎಂ.ಎಚ್.ನಾಯ್ಕ ವಹಿಸಲಿದ್ದಾರೆ. ವಿವಿಧ ವಿಚಾರಗೋಷ್ಠಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಸಾಹಿತಿಗಳು, ಗಣ್ಯರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಕಾರ್ಯದರ್ಶಿ ಪ್ರಮೋದ ನಾಯ್ಕ, ಪ್ರಮುಖರಾದ ರೋಹಿದಾಸ ನಾಯ್ಕ, ಬೀರಣ್ಣ ನಾಯಕ, ಗಿರೀಶ ವನ್ನಳ್ಳಿ, ಸುರೇಶ ಭಟ್, ಯೋಗೀಶ ಪಟಗಾರ, ಮಾಲಾ ನಾಯ್ಕ, ಸಂಧ್ಯಾ ಭಟ್, ನೇತ್ರಾವತಿ ನಾಯ್ಕ ಇತರರು ಇದ್ದರು.